Advertisement
ಕಳೆದ ಮೂರ್‍ನಾಲ್ಕು ವರ್ಷ ಉಂಟಾದ ಭೀಕರ ಬರಗಾಲದಿಂದ ಹೊಲದಲ್ಲಿ ಕೆಲಸವಿಲ್ಲದೆ ಅಸಹಾಯಕರಾಗಿ ಬೇರೆ ಪ್ರದೇಶಗಳಿಗೆ ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದ ಜನರಿಗೆ ಅದರಲ್ಲೂ ರೈತ ಸಮುದಾಯಕ್ಕೆ ಆಸರೆಯಾಗಬೇಕು. ಅವರ ಕೈಗಳಿಗೆ ಕೆಲಸ ನೀಡಬೇಕು ಎಂಬ ಉದ್ದೇಶದಿಂದ ಸರಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಾರಿಗೆ ತಂದ “ಜಲಾಮೃತ’ ಯೋಜನೆ ಅಕ್ಷರಶಃ ರೈತರ ಬಾಳಿಗೆ ಆಸರೆಯಾಗಿದೆ. ಭೂ ಅಭಿವೃದ್ಧಿ, ನೀರಿನ ಸಂಗ್ರಹಣೆ ಮತ್ತು ನೀರಿನ ಸಂರಕ್ಷಣೆ ಜಲಾಮೃತ ಯೋಜನೆ ಮುಖ್ಯ ಉದ್ದೇಶ. ರೈತರು ಈ ಯೋಜನೆ ಅಳವಡಿಸಿಕೊಂಡಿದ್ದೇ ಆದರೆ ಮುಂದೆ ಅವರ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂಬುದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕೆ.ವಿ. ಅವರ ಅಭಿಪ್ರಾಯ.
Related Articles
Advertisement
ಚಿಕ್ಕೋಡಿಯಲ್ಲಿ ಆರಂಭ : ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲೇ ಮೊದಲ ಬಾರಿಗೆ ಚಿಕ್ಕೋಡಿ ತಾಲೂಕಿನಲ್ಲಿ ಈ ಜಲಾಮೃತ ಯೋಜನೆ ಅನುಷ್ಠಾನ ಗೊಳಿಸಲಾಯಿತು. ರೈತರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿತು. ಚಿಕ್ಕೋಡಿಯಲ್ಲಿ ಆರಂಭವಾದ ಯೋಜನೆ ಈಗ ಜಿಲ್ಲೆಯ ಎಲ್ಲ ಪ್ರದೇಶಗಳಿಗೆ ವಿಸ್ತರಣೆಯಾಗಿದೆ. ಇದುವರೆಗೆ ಯೋಜನೆಗೆ 35 ಕೋಟಿ ರೂ. ವೆಚ್ಚವಾಗಿದೆ. ಅನೇಕ ಕಡೆ ನೀರಿನ ಸಮಸ್ಯೆ ದೂರವಾಗಿದೆ. ಯೋಜನೆ ಯಶಸ್ವಿಯಾದಂತೆ ಬೇಡಿಕೆಯೂ ವೃದ್ಧಿಯಾಗಿದೆ.
ರೈತರಿಂದಲೂ ಹೆಚ್ಚಿನ ಬೇಡಿಕೆ : ಯೋಜನೆಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಯೋಜನೆಯ ಲಾಭ ಎಲ್ಲ ರೈತರಿಗೆ ಸಿಗಲಿ ಎನ್ನುವ ಕಾರಣದಿಂದ ಎರಡನೇ ಹಂತದ ಜಲಾಮೃತ ಯೋಜನೆ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ನಡೆದಿದೆ. ಎರಡನೇ ಹಂತದಲ್ಲಿ ಇದುವರೆಗೆ ಮೂರು ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಒಟ್ಟು 66 ಕಿರು ಜಲಾನಯನ ಯೋಜನೆಗಳ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿದೆ. ರೈತರಿಂದಲೂ ಬಹಳ ಬೇಡಿಕೆ ಬರುತ್ತಿದೆ ಎಂಬುದು ಅಧಿಕಾರಿಗಳ ಹೇಳಿಕೆ
ಜಲಾಮೃತ ಯೋಜನೆ ಒಳ್ಳೆಯ ಪರಿಣಾಮ ಬೀರಿದೆ. ವಿಶೇಷವಾಗಿ ಖಾನಾಪುರ ತಾಲೂಕಿನಲ್ಲಿ ಇದರಲ್ಲಿ ನೇರ ಪರಿಣಾಮ ಕಂಡುಬಂದಿದೆ. ಯೋಜನೆಯಡಿ ಕೆರೆಗಳ ಪುನಶ್ಚೇತನ, ಬದುಗಳ ನಿರ್ಮಾಣದಿಂದ ಅಂತರ್ಜಲ ಹೆಚ್ಚಳವಾಗಿದೆ. ಅನೇಕ ಕಡೆ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ. ರೈತರು ಸ್ವಯಂ ಪ್ರೇರಣೆಯಿಂದ ಯೋಜನೆ ಲಾಭಪಡೆಯುತ್ತಿದ್ದಾರೆ.-ರಾಜೇಂದ್ರ ಕೆ.ವಿ., ಜಿಪಂ ಸಿಇಒ
ಜಲಾಮೃತ ಯೋಜನೆಯಿಂದ 55 ಕಿರು ಜಲಾನಯನ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಜಿಲ್ಲೆಯಲ್ಲಿ ಇದು ಸಂಪೂರ್ಣ ಯಶಸ್ವಿಯಾಗಿದೆ. ರೈತರಿಗೆ ಒಳ್ಳೆಯ ಬದುಕು ಕಟ್ಟಿಕೊಟ್ಟಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಬಡವರಿಗೆ ವರದಾನವಾಗಿದೆ. -ಎಚ್.ಡಿ. ಕೋಳೇಕರ, ಕೃಷಿ ಇಲಾಖೆ ಉಪನಿರ್ದೇಶಕ
-ಕೇಶವ ಆದಿ