Advertisement

ಆಪತ್ಕಾಲದಲ್ಲಿ ಆಸರೆಯಾದ ಜಲಾಮೃತ

04:34 PM May 15, 2020 | Suhan S |

ಹಾವೇರಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲಾ ಪಂಚಾಯತ್‌ ಹಾಗೂ ಕೃಷಿ ಇಲಾಖೆ ಜಿಲ್ಲೆಯಲ್ಲಿ “ಜಲಾಮೃತ’ ಜಲಾನಯನ ಯೋಜನೆಯಡಿ 22,082 ಹೆಕ್ಟೇರ್‌ ಪ್ರದೇಶದಲ್ಲಿ ನೀರು ಮತ್ತು ಮಣ್ಣು ಸಂರಕ್ಷಣೆ ಚಟುವಟಿಕೆ ಮೂಲಕ ಜಲಸಂಪನ್ಮೂಲ ಕ್ರೋಡೀಕರಣ ಕಾರ್ಯ ಕೈಗೊಂಡಿದೆ.

Advertisement

ಜಲಾಮೃತ ಜಲಾನಯನ ಯೋಜನೆಯಡಿ ಪ್ರಮುಖವಾಗಿ ನೀರು ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳಾದ ಮಣ್ಣಿನ ಬದು, ಕೃಷಿ ಹೊಂಡ, ನೀರಿನ ಕಾಲುವೆ, ಕೊಳವೆಬಾವಿ ಪುನರುಜ್ಜೀವನ, ಕೃಷಿ ಅರಣ್ಯ, ತೋಟಗಾರಿಕೆ ಇತ್ಯಾದಿ ಕಾಮಗಾರಿಗಳನ್ನು ಕೈಗೊಂಡಿದೆ.

ಇದೀಗ ರಾಣಿಬೆನ್ನೂರು ತಾಲೂಕಿನಲ್ಲಿ 2,710 ಹೆಕ್ಟೇರ್‌ ಪ್ರದೇಶದ ಚಟುವಟಿಕೆ ನಡೆಯುತ್ತಿದೆ. ಈ ಭಾಗದ ಮೈದೂರು ಉಪಜಲಾನಯನ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿ ಚಿಕ್ಕ ಅರಳಿಹಳ್ಳಿ, ಬೇವಿನಹಳ್ಳಿ, ಗುಡಗೂರ, ಮೈದೂರು, ಕುದರಿಹಾಳ, ಹರನಗಿರಿ, ಯತ್ತಿನಹಳ್ಳಿ ಹೊನ್ನತ್ತಿ, ಕೆರಿಮಲ್ಲಾಪುರ ಒಂಭತ್ತು ಗ್ರಾಮಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. 153ಕ್ಕೂ ಹೆಚ್ಚು ಜನ ಕೂಲಿಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ತಿಳಿಸಿದ್ದಾರೆ.

ಮೈದೂರ ಜಲಾನಯನ ಪ್ರದೇಶದಲ್ಲಿ 2,234 ಹೆಕ್ಟೇರ್‌ ಕಂದಕ ಬದು ನಿರ್ಮಾಣ ಕಾರ್ಯ, 518 ಕಲ್ಲಿನ ಕೋಡಿ, 30 ರಬ್ಬಲ್‌ ತಡೆ, 121 ಕೃಷಿಹೊಂಡ, 78 ಎರೆಹುಳ ತೊಟ್ಟಿ, 17 ತಡೆ ಅಣೆಕಟ್ಟು, 489 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ, 1203 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯೀಕರಣ, 50 ಹೆಕ್ಟೇರ್‌ ಪ್ರದೇಶದಲ್ಲಿ ಮೇವು ಅಭಿವೃದ್ಧಿ, 118 ಇಂಗು ಗುಂಡಿ, 18 ದನದ ಕೊಟ್ಟಿಗೆ, 18 ಕುರಿ ಕೊಟ್ಟಿಗೆ ಕಾಮಗಾರಿಗಳ ನಿರ್ಮಾಣದ ಉದ್ದೇಶ ಹೊಂದಲಾಗಿದೆ. ಇದರಲ್ಲಿ 125 ಹೆಕ್ಟೇರ್‌ ಪ್ರದೇಶದಲ್ಲಿ ಈಗಾಗಲೇ ಕಂದಕ ಬದು ನಿರ್ಮಾಣ ಮಾಡಲಾಗಿದೆ.

ನಿತ್ಯ ಈ ಉಪಜಲಾನಯನ ವ್ಯಾಪ್ತಿಯಲ್ಲಿ 250ರಿಂದ 300 ಜನ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಕೂಲಿಕಾರರಿಗೆ ಕೋವಿಡ್‌ ಸುರಕ್ಷತಾ ಕ್ರಮಗಳ ಕುರಿತು ಜಾಗೃತಿಯ ಜೊತೆಗೆ ಮುಖಗವಸು ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೆಲಸ ನಿರ್ವಹಿಸುತ್ತಿದ್ದಾರೆ.

Advertisement

ಜಿಲ್ಲಾ ಮಾಹಿತಿ: ಹಾವೇರಿ ತಾಲೂಕಿನಲ್ಲಿ 4849.07 ಹೆಕ್ಟೇರ್‌ ಪ್ರದೇಶದ ಜಲಾಯನಯನ ಚಟುವಟಿಕೆ ನಡೆಯುತ್ತಿದೆ. ದೇವಿಹೊಸೂರು ಉಪಜಲಾನಯನ ವ್ಯಾಪ್ತಿಯಲ್ಲಿ ಆಲದಕಟ್ಟಿ, ನಾಗಣೂರು, ದೇವಿಹೊಸೂರು, ಹೊಸಳ್ಳಿ ಹಾಗೂ ವೆಂಕಟಾಪುರ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಸವಣೂರು ತಾಲೂಕಿನಲ್ಲಿ 3020.27 ಹೆಕ್ಟೇರ್‌ ಪ್ರದೇಶದ ಚಟುವಟಿಕೆ ನಡೆಯುತ್ತಿದೆ. ಕಳಸೂರು ಉಪಜಲಾನಯನ ವ್ಯಾಪ್ತಿಯಲ್ಲಿ ಕಳಸೂರು ಹಾಗೂ ಹತ್ತಿಮತ್ತೂರು ಗ್ರಾಮಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ.

ಶಿಗ್ಗಾಂವ ತಾಲೂಕಿನಲ್ಲಿ 2900.35 ಹೆಕ್ಟೇರ್‌ ಪ್ರದೇಶದ ಚಟುವಟಿಕೆ ನಡೆಯುತ್ತಿದೆ. ಬಂಕಾಪುರ ಉಪಜಲಾನಯನ ವ್ಯಾಪ್ತಿಯಲ್ಲಿ ನಿರಲಕಟ್ಟಿ, ಬಿಸಲಹಳ್ಳಿ, ಮುನವಳ್ಳಿ, ಕುರಸಾಪುರ, ನಾರಾಯಣಪುರ ಹಾಗೂ ಕಲ್ಯಾಣ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಬ್ಯಾಡಗಿ ತಾಲೂಕಿನಲ್ಲಿ 2850.36 ಹೆಕ್ಟೇರ್‌ ಪ್ರದೇಶದ

ಚಟುವಟಿಕೆ ನಡೆಯುತ್ತಿದೆ. ಹೆಡಿಗೊಂಡ ಉಪಜಲಾನಯನ ವ್ಯಾಪ್ತಿಯಲ್ಲಿ ಚಿನ್ನಿಕಟ್ಟಿ, ತಿಪ್ಪಲಾಪುರ, ನಾಗಾಪುರ, ಹೆಡಿಗೊಂಡ, ಬಡಮಲ್ಲಿ ಹಾಗೂ ದಾಸನಕೊಪ್ಪ ಗ್ರಾಮಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಹಾನಗಲ್‌ ತಾಲೂಕಿನಲ್ಲಿ 2765.36 ಹೆಕ್ಟೇರ್‌ ಪ್ರದೇಶದ ಚಟುವಟಿಕೆ ನಡೆಯುತ್ತಿದೆ. ಉಪ್ಪಣಸಿ ಉಪಜಲಾನಯನ ವ್ಯಾಪ್ತಿಯಲ್ಲಿ ಚಿನ್ನಿಕಟ್ಟಿ, ತಿಪ್ಪಲಾಪುರ, ನಾಗಾಪುರ, ಹೆಡಿಗೊಂಡ, ಬಡಮಲ್ಲಿ ಹಾಗೂ ದಾಸನಕೊಪ್ಪ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಹಿರೇಕೆರೂರು ತಾಲೂಕಿನಲ್ಲಿ 2986.49 ಹೆಕ್ಟೇರ್‌ ಪ್ರದೇಶದ ಚಟುವಟಿಕೆ ನಡೆಯುತ್ತಿದೆ. ಅಣಜಿ ಉಪಜಲಾನಯನ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿ ನಾಗವಂದ, ತಡಕನಹಳ್ಳಿ, ಅಣಜಿ ಹಾಗೂ ಇಸ್ರಾಮಪುರ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ.

ಒಟ್ಟು ಜಿಲ್ಲೆಯ ಏಳು ತಾಲೂಕುಗಳಲ್ಲಿ 7017 ಮಾನವ ದಿನಗಳನ್ನು ಸೃಜಿಸಿ 226 ಕಾಮಗಾರಿ ಕೈಗೊಳ್ಳಲಾಗಿದ್ದು, 493 ಹೆಕ್ಟೇರ್‌ ಪ್ರದೇಶದಲ್ಲಿ ಕಂದಕ ಬದು ನಿರ್ಮಾಣ ಕೈಗೊಳ್ಳಲಾಗಿದೆ ಹಾಗೂ 2393 ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ಕಾಮಗಾರಿಗಳು ಪ್ರಗತಿಯಲ್ಲಿವೆ.

ಕೋವಿಡ್ ಲಾಕ್‌ಡೌನ್‌ನಿಂದಾಗಿ ಬೇರೆಡೆ ಹೋಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸ್ವಾಭಿಮಾನದಿಂದ ದುಡಿಯಲು ಕೂಲಿ ಕೆಲಸ ತಪ್ಪಲ್ಲ. ಈ ಕಾರಣದಿಂದ ಉದ್ಯೋಗ ಖಾತ್ರಿ ಕೂಲಿಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದೇನೆ. ಇದರಿಂದ ನನ್ನ ಕುಟುಂಬದ ಜೀವನ  ಸರಳವಾಗಿದೆ. ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಶಿಕ್ಷಕಳಾಗಿ ಕೆಲಸ ಮಾಡುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಕಷ್ಟಗಳ ನಿರ್ವಹಣೆಗೆ ಉದ್ಯೋಗ ಖಾತ್ರಿ ಕೆಲಸ ಆಸರೆಯಾಗಿದೆ.  –ಲಾಲವ್ವ ಲಮಾಣಿ, ಪದವೀಧರೆ

Advertisement

Udayavani is now on Telegram. Click here to join our channel and stay updated with the latest news.

Next