ಧಾರವಾಡ: ಜಲಾಮೃತ ಕೈಪಿಡಿ ರಾಜ್ಯದ ಜಲ ಕಾರ್ಯಕರ್ತರಿಗೊಂದು ದಾರಿದೀಪವಾಗಲಿ ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ(ವಾಲ್ಮಿ)ಯಲ್ಲಿ ಮಂಗಳವಾರ ಜರುಗಿದ ಜಲಾಮೃತ ಯೋಜನೆಯ ತಾಂತ್ರಿಕ ಕೈಪಿಡಿ ಸಿದ್ಧಪಡಿಸುವ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಜಲ ಸಂಕಷ್ಟದ ಕುರಿತು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಮಾತನಾಡುತ್ತಾರೆ. ಆದರೆ ಕೆಲವರಷ್ಟೆ ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಜಲಾಮೃತ ಕೈಪಿಡಿಯಲ್ಲಿ ಜಲ ಸಂರಕ್ಷಣೆಯಲ್ಲಿ ಪ್ರತಿ ಯೊಬ್ಬರ ಜವಾಬ್ದಾರಿಗಳೇನು ಎನ್ನುವುದನ್ನು ಅಳವಡಿಸಿಕೊಳ್ಳಬೇಕು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶ ಕುಮಾರ ಮಾತನಾಡಿ, ಅರಣ್ಯ ಇಲಾಖೆ ರೈತರಿಗೆ ಗಿಡ ನೆಟ್ಟು ಬೆಳೆಸಲು ಪ್ರೋತ್ಸಾಹಧನ ನೀಡುತ್ತಿದೆ. ಇಂತಹ ಯೋಜನೆಗಳ ಮಾಹಿತಿಯನ್ನು ಕೈಪಿಡಿಯಲ್ಲಿ ಅಳವಡಿಸಬೇಕು. ಬೀದಿ ನಾಟಕಗಳ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ನೀರಿನ ದುರ್ಬಳಕೆ ತಡೆಗಟ್ಟಲು ಕಾಯ್ದೆ ಜಾರಿಗೆ ಬರುವಂತಾಗಬೇಕು ಎಂದು ಹೇಳಿದರು.
ಜಲಾಮೃತ ನಿರ್ದೇಶಕ ಬಿ. ನಿಜಲಿಂಗಪ್ಪ ಮಾತನಾಡಿ, ತಾಂತ್ರಿಕ ಕೈಪಿಡಿ ತಯಾರಿಸಲು ಎಲ್ಲ ತಜ್ಞರು ಭಾಗವಹಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ. ಮುಖ್ಯ ಸವಾಲುಗಳು, ಪರಿಹಾರಗಳು, ಕಾರ್ಯರೂಪಕ್ಕೆ ತರುವುದು ಮತ್ತು ಸಂಪೂರ್ಣ ಜೈವಿಕ ವ್ಯವಸ್ಥೆ ಮೇಲೆ ಇದರ ಪರಿಣಾಮಗಳ ವಿವರಗಳನ್ನು ಒಳಗೊಂಡ ಲೇಖನಗಳನ್ನು ಕಾರ್ಯಾಗಾರದ ತಾಂತ್ರಿಕ ತಂಡಗಳ ಮುಖ್ಯಸ್ಥರು ಸಿದ್ಧಪಡಿಸಿ ಸಲ್ಲಿಸುವಂತೆ ಕೋರಿದರು.
ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಅಧ್ಯಕ್ಷತೆ ವಹಿಸಿದ್ದರು. ಮಹದೇವಗೌಡ ಹುತ್ತನಗೌಡರ ಸ್ವಾಗತಿಸಿದರು. ಕೃಷ್ಣಾಜಿರಾವ್ ವಂದಿಸಿದರು.