Advertisement
ಬೈಲಹೊಂಗಲ: ನರೇಗಾ ಯೋಜನೆಯಡಿ ಕೃಷಿ ಇಲಾಖೆಯ ಜಲಾಮೃತ ಕಾರ್ಯಕ್ರಮದಲ್ಲಿ ತಾಲೂಕಿನ 11 ಗ್ರಾಪಂ ವ್ಯಾಪ್ತಿಯಲ್ಲಿ ಜಲಶಕ್ತಿ ಅಭಿಯಾನ ಪ್ರಯುಕ್ತ ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ನಿಲ್ಲುವಂತೆ ಮತ್ತು ನಿಂತ ನೀರನ್ನು ಭೂಮಿಯಲ್ಲಿ ಇಂಗಿಸುವಂತೆ ಮಾಡುವುದಕ್ಕಾಗಿ ರೈತರ ಹೊಲಗಳಲ್ಲಿ ಬದು ನಿರ್ಮಾಣ ಕಾರ್ಯ ಹಾಗೂ ಹಳ್ಳಗಳಲ್ಲಿ ಹೂಳೆತ್ತುವ ಮೂಲಕ ಮಳೆ ನೀರನ್ನು ಹಿಡಿದಿಡಲು ಯತ್ನಿಸಲಾಗುತ್ತಿದೆ. ಆಲ್ಲದೇ ಯೋಜನೆ ದುಡಿಯುವ ಕೈಗಳಿಗೆ ಕೆಲಸ ನೀಡಿದೆ.
Related Articles
Advertisement
ಕಳೆದ ವರ್ಷ 2020-21 ನೇ ಸಾಲಿನಲ್ಲಿ ಕೃಷಿ ಇಲಾಖೆಯಿಂದ ತಾಲೂಕಿನಲ್ಲಿ 2,00,415 ಮಾನವ ದಿನ ಸೃಜಿಸಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರತಿ ಎಕರೆ ಜಮೀನಿನಲ್ಲಿ 4ಹಿ2ಹಿ10 ಅಡಿಯ ಅಂದಾಜು 20 ಕಂದಕಗಳನ್ನು ನಿರ್ಮಾಣ ಮಾಡಬಹುದು. ಒಂದು ಕಂದಕದಲ್ಲಿ ಅಂದಾಜು 2500 ಲೀ. ಮಳೆ ನೀರನ್ನು ಸಂಗ್ರಹಿಸಬಹುದು. ಇದರಿಂದ 1 ಎಕರೆಯಲ್ಲಿ ಅಂದಾಜು 50,000 ಲೀ. ನೀರನ್ನು ಸಂಗ್ರಹಿಸಬಹುದಾಗಿದೆ. ಸದರಿ ಕಾಮಗಾರಿಗಳಿಂದ ರೈತರ ಜಮೀನಿಗೆ ಬದು ಆಗುವುದಲ್ಲದೇ ಮಣ್ಣು ಸಂರಕ್ಷಣೆ ಜೊತೆಗೆ ಅಂತರ್ಜಲ ಹೆಚ್ಚಿಸಲು ತುಂಬಾ ಸಹಕಾರಿಯಾಗಿದೆ.
ಪ್ರತಿ ರೈತರು ಬದು ನಿರ್ಮಾಣವನ್ನು ಕೃಷಿ ಇಲಾಖೆ ಜಲಾಮೃತ ಕಾರ್ಯಕ್ರಮದಡಿ ಅಥವಾ ಗ್ರಾಮ ಪಂಚಾಯತಿಯಡಿ ಪಡೆದುಕೊಂಡು ತಮ್ಮ ಜಮೀನಿನ ತೇವಾಂಶವನ್ನು ಸುಮಾರು ಶೇ. 15ರಷ್ಟು ಹಾಗೂ ಆದಾಯವನ್ನೂ ಹೆಚ್ಚಿಸಿಕೊಳ್ಳಬಹುದಾಗಿದೆ. 2020-21ನೇ ಸಾಲಿನಲ್ಲಿ ತಾಲೂಕಿನ 438 ರೈತರು ಈ ಯೋಜನೆ ಪ್ರಯೋಜನ ಪಡೆದು ತಮ್ಮ ಹೊಲದಲ್ಲಿ ಬದು ನಿರ್ಮಾಣ ಮಾಡಿಕೊಂಡಿದ್ದರೆ ಪ್ರಸಕ್ತ ಸಾಲಿನಲ್ಲಿ ಈವರೆಗೆ 65 ರೈತರು ಈ ಯೋಜನೆ ಲಾಭ ಪಡೆಯಲು ಮುಂದೆ ಬಂದಿದ್ದಾರೆ.