Advertisement

ವರ್ಷ ಕಳೆದರೂ ದುರಸ್ತಿಯಾಗದ ಜಳಕದ ಕೆರೆ ರಸ್ತೆ

11:03 AM Apr 29, 2019 | Naveen |

ತೋಕೂರು: ಇಲ್ಲಿನ ಪಡುಪಣಂಬೂರು ಗ್ರಾ.ಪಂ. ನ ಬೆಳ್ಳಾಯರು ಗ್ರಾಮದಲ್ಲಿ ನಡೆಸಿರುವ ಐಎಸ್‌ಪಿಎಲ್ನ (ಪಾದೂರು) ಪೈಪ್‌ಲೈನ್‌ ಕಾಮಗಾರಿಗಾಗಿ ಸುಸಜ್ಜಿತ ಕಾಂಕ್ರೀಟ್ ರಸ್ತೆಯೊಂದನ್ನು ಕಡಿದು ವರ್ಷ ಕಳೆದರೂ ಸೂಕ್ತವಾಗಿ ದುರಸ್ತಿ ನಡೆಸದೇ ನಿರ್ಲಕ್ಷಿಸಿರುವುದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವರು ಷಷ್ಠಿಯ ಸಂದರ್ಭದಲ್ಲಿ ಜಳಕದ ಧಾರ್ಮಿಕ ವಿಧಿ ವಿಧಾನಕ್ಕೆ ದೇವರ ಮೂರ್ತಿಯ ಸವಾರಿ ಇದೇ ರಸ್ತೆಯಾಗಿ ತೆರಳುತ್ತಿರುವುದರಿಂದ ಜಳಕದ ರಸ್ತೆ ಎಂದೇ ಪ್ರಸಿದ್ಧಿಯಾಗಿದೆ.

ಬೆಳ್ಳಾಯರು ಗ್ರಾಮಸ್ಥರು ತೋಕೂರಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವುದರಿಂದ ಇದನ್ನು ಕಳೆದ ಎರಡು ವರ್ಷದ ಹಿಂದೆ ಜಿ.ಪಂ.ನ ಮೂಲಕ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿಯ ಯೋಜನೆಯಲ್ಲಿ 50 ಲಕ್ಷ ರೂ. ವೆಚ್ಚದ ಅನುದಾನದಲ್ಲಿ ಸಂಪೂರ್ಣವಾಗಿ ಕಾಂಕ್ರೀಟ್ ಕಾಮಗಾರಿ ನಡೆಸಿ ಅಭಿವೃದ್ಧಿಪಡಿಸಲಾಗಿತ್ತು.

ರಸ್ತೆಯಲ್ಲಿ ಬಿರುಕು
ಈ ರಸ್ತೆಯ ನಿರ್ಮಾಣದ ಅನಂತರ ಐಎಸ್‌ಪಿಎಲ್ ಯೋಜನೆಗಾಗಿ ಪಾದೂರು ಪೈಪ್‌ಲೈನ್‌ ಹಾದುಹೋಗಲು ರಸ್ತೆಯನ್ನೇ ಅಗೆದು ಅನಂತರ ಕಾಟಾಚಾರಕ್ಕೆ ಕಾಂಕ್ರೀಟ್ ಮಿಶ್ರಿತ ರಸ್ತೆಯನ್ನು ದುರಸ್ತಿಗೊಳಿಸಿದ್ದರು. ಅದು ಅಲ್ಲಲ್ಲಿ ಬಿರುಕು ಬಿಟ್ಟಿದೆ. ರಸ್ತೆಯು ಪರಿಪೂರ್ಣವಾಗಿ ನಿರ್ಮಾಣವಾಗದಿರುವುದರಿಂದ ರಸ್ತೆಗೆ ಕಲ್ಲುಗಳಿಂದ ಬಂದ್‌ ಮಾಡಿ ಪಕ್ಕದಲ್ಲಿ ಮಣ್ಣಿನ ರಸ್ತೆಯನ್ನು ಸುತ್ತಿ ಬಳಸಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ಈ ರೀತಿಯಾಗಿ ನಿರ್ಮಿಸಿ ವರ್ಷ ಕಳೆದರೂ ಸಹ ಈಗಲೂ ಮಣ್ಣಿನ ರಸ್ತೆಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ನಿತ್ಯ ಸಂಚಾರಿಗಳಿಗೆ ಇದೆ.

ಗ್ರಾಮ ಪಂಚಾಯತ್‌ ಸಹ ಗ್ರಾಮಸ್ಥರ ವಿರೋಧಕ್ಕೆ ಮಣಿದು ಅನೇಕ ಬಾರಿ ಗುತ್ತಿಗೆದಾರರಿಗೆ ಮೌಖೀಕವಾಗಿ ತಿಳಿಸಿದ್ದರೂ ಸಹ ರಸ್ತೆ ದುರಸ್ತಿ ಗೊಳಿಸಿಲ್ಲ. ಇನ್ನು ಮಳೆಗಾಲದಲ್ಲಿ ಮಣ್ಣಿನ ರಸ್ತೆಯು ಕೆಸರು ಮಿಶ್ರಿತ ರಸ್ತೆಯಾಗುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆ ತಪ್ಪಿದ್ದಲ್ಲ ಎಂಬುದು ಗ್ರಾಮಸ್ಥರ ಅಳಲು.

Advertisement

ಮೊದಲೇ ಎಚ್ಚರಿಸಿದ್ದೆವು
ರಸ್ತೆಯನ್ನು ಬೇಕಾಬಿಟ್ಟು ಅಗೆದು ದುರಸ್ತಿ ಕಾರ್ಯ ನಡೆಸುವ ಮೊದಲೇ ನಾವು ಪಂಚಾಯತ್‌ ಮೂಲಕ ವ್ಯವಸ್ಥಿತವಾಗಿ ನಡೆಸಬೇಕು ಎಂದು ಎಚ್ಚರಿಸಿದ್ದೇವು. ಅದರೆ ಯಾವುದಕ್ಕೂ ಕಿವಿಗೊಡದೇ, ಕಳಪೆ ಮಟ್ಟದಲ್ಲಿ ದುರಸ್ತಿ ನಡೆಸಿರುವುದರಿಂದ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಸಂಚರಿಸಲು ಯೋಗ್ಯವಾಗಿಲ್ಲ . – ಧರ್ಮಾನಂದ ಶೆಟ್ಟಿಗಾರ್‌,
– ಗ್ರಾಮಸ್ಥರು.

ಎನ್‌ಒಸಿ ನೀಡುವುದಿಲ್ಲ
ಗ್ರಾಮಸ್ಥರ ಬೇಡಿಕೆಯಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೆವು. ಆದರೆ ಸೂಕ್ತವಾಗಿ ಸ್ಪಂದಿಸದೇ ದುರಸ್ತಿ ನಡೆಸಿರುವುದು ಸಹ ಸಮಾಧಾನ ತಂದಿಲ್ಲ. ಯೋಜನೆಯ ಎಂಜಿನಿಯರ್‌ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಗ್ರಾಮ ಪಂಚಾಯತ್‌ನಿಂದ ಕಾಮಗಾರಿ ಪೂರ್ಣಗೊಳಿಸಿದ ಬಗ್ಗೆ ಎನ್‌ಒಸಿಯನ್ನು ನೀಡುವುದಿಲ್ಲ. ಇದರಿಂದ ಗುತ್ತಿಗೆದಾರರಿಗೆ ನಷ್ಟವಾದರೂ ಗ್ರಾಮದ ಹಿತಕ್ಕೆ ನಾವು ಬದ್ಧರಾಗಿದ್ದೇವೆ.
ಮೋಹನ್‌ದಾಸ್‌,
ಅಧ್ಯಕ್ಷರು, ಪಡುಪಣಂಬೂರು ಗ್ರಾಮ ಪಂಚಾಯತ್‌

ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next