ಜಾಲಹಳ್ಳಿ: ಪಟ್ಟಣದ 33 ಕೆವಿ ವಿದ್ಯುತ್ ಪ್ರಸರಣ ಉಪ ಕೇಂದ್ರ ಅಲ್ಪ ಮಳೆ ಸುರಿದರೂ ಜಲಾವೃತ್ತವಾಗುವುದರಿಂದ ಕೇಂದ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ವಿದ್ಯುತ್ ಕೈಕೊಟ್ಟು ಜನತೆ ನಾನಾ ಸಮಸ್ಯೆ ಎದುರಿಸುವಂತಾಗಿದೆ.
Advertisement
ಜಾಲಹಳ್ಳಿ-ತಿಂಥಣಿ ಬ್ರಿಜ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜೆ.ಜೆ. ಶಿಕ್ಷಣ ಸಂಸ್ಥೆ ಪಕ್ಕದ 33 ಕೆವಿ ಸಾಮರ್ಥ್ಯದ ವಿದ್ಯುತ್ ಪ್ರಸರಣ ಕೇಂದ್ರ ತಗ್ಗು ಪ್ರದೇಶದಲ್ಲಿದೆ. ಸಣ್ಣ ಪ್ರಮಾಣದಲ್ಲಿ ಮಳೆ ಬಂದರೂ ಕೇಂದ್ರದ ಆವರಣದಲ್ಲಿ ನೀರು ನಿಲ್ಲುತ್ತದೆ. ನಿಂತ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದ್ದರಿಂದ ಮಳೆ ಬಂದು ಮೂರ್‍ನಾಲ್ಕು ದಿನವಾದರೂ ತಗ್ಗಿನಲ್ಲಿ ನೀರು ನಿಂತಿರುತ್ತದೆ. ಹೀಗಾಗಿ ಪ್ರಸರಣ ಕೇಂದ್ರದ ಸಿಬ್ಬಂದಿ ಜೀವ ಭಯದಲ್ಲೇ ಕಾರ್ಯ ನಿರ್ವಹಿಸಬೇಕಿದೆ.
ಹೆಚ್ಚು ಗ್ರಾಮಗಳು ಬರುತ್ತಿದ್ದು, ಮಳೆ ಬಂದು ಪ್ರಸರಣ ಕೇಂದ್ರದಲ್ಲಿ ನೀರು ನಿಂತರೆ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತವಾಗುತ್ತದೆ. ಗ್ರಾಮಸ್ಥರು ಕತ್ತಲಲ್ಲೇ ಕಾಲ ಕಳೆಯಬೇಕಾಗುತ್ತದೆ. ಪ್ರಸರಣ ಕೇಂದ್ರದ ಪಕ್ಕದಲ್ಲಿ ಹಳ್ಳವಿದ್ದು, ಈ ಹಳ್ಳಕ್ಕೆ ಎಚ್.ಸಿದ್ದಾಪುರು ಸೇರಿ ಹಲವು ಸೀಮೆಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತದೆ. ಈ ಹಳ್ಳದ ಜಾಗವನ್ನು ಪ್ರಭಾವಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿ ಹಳ್ಳವನ್ನು ಕಿರಿದು ಮಾಡಿದ್ದಾರೆ. ಪರಿಣಾಮ ಹಳ್ಳಕ್ಕೆ ಬರುವ ನೀರು ಕೂಡ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ನುಗ್ಗಿ ಇಡೀ ಕೇಂದ್ರವೇ ಜಲಾವೃತವಾಗುತ್ತದೆ. ಇದರಿಂದ ವಿದ್ಯುತ ಪ್ರಸರಣ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ವಾರ ಸುರಿದ ಮಳೆಗೆ ವಿದ್ಯುತ್ ಪ್ರಸರಣ ಉಪ ಕೇಂದ್ರ ಜಲಾವೃತಗೊಂಡ ಪರಿಣಾಮ ಗ್ರಾಮದಲ್ಲಿ ಎರಡು ದಿನ ವಿದ್ಯುತ್ ಕೈಕೊಟ್ಟು ಗ್ರಾಮಸ್ಥರು ಕುಡಿಯುವ ನೀರಿಗೆ ಪರದಾಡುವಂತಾಯಿತು.
Related Articles
Advertisement
ಮೇಲ್ದರ್ಜೆಗೆ ಏರಿಕೆ: ಸದಾ ಅಪಾಯದ ಅಂಚಿನಲ್ಲಿರುವ 33 ಕೆವಿ ಸಾಮರ್ಥ್ಯದ ಜಾಲಹಳ್ಳಿ ವಿದ್ಯುತ್ ಪ್ರಸರಣ ಉಪ ಕೇಂದ್ರವನ್ನು 110 ಕೆವಿ ಸಾಮರ್ಥ್ಯಕ್ಕೆ ಹೆಚ್ಚಿಸಿ ಸರಕಾರ ಆದೇಶ ಹೊರಡಿಸಿದೆ. ಜೆಸ್ಕಾಂ ಅ ಧಿಕಾರಿಗಳು ಸುರಕ್ಷಿತ ಸ್ಥಳವನ್ನು ಗುರುತಿಸಬೇಕು. 33 ಕೆವಿ ಸ್ಟೇಷನ್‌ನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.