Advertisement

ಹಾಲುಮತ ಸಂಸ್ಕೃತಿ ವೈಭವಕ್ಕೆ ಚಾಲನೆ

11:49 AM Jan 13, 2020 | Naveen |

ಜಾಲಹಳ್ಳಿ: ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಎಲ್ಲ ಶೋಷಿತ ಸಮಾಜಗಳು ಒಂದಾಗಬೇಕು ಎಂದು ವರುಣಾ ಕ್ಷೇತ್ರದ ಶಾಸಕ ಡಾ| ಯತೀಂದ್ರ ಹೇಳಿದರು.

Advertisement

ಸಮೀಪದ ತಿಂಥಣಿ ಬ್ರಿಜ್‌ ಕಾಗಿನೆಲೆ ಕನಕಗುರು ಪೀಠದಲ್ಲಿ ರವಿವಾರದಿಂದ ಆರಂಭವಾದ ಹಾಲುಮತ ಸಂಸ್ಕೃತಿ ವೈಭವ-2020 ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಹಾಲುಮತ-
ಗಂಗಾಮತ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದುಳಿದ ಸಮಾಜಗಳ ಜನಸಂಖ್ಯೆ ಹೆಚ್ಚಿದ್ದರೂ ಕೂಡ ನಾವೆಲ್ಲಾ ಬಿಡಿ ಬಿಡಿಯಾಗಿ ಇರುವುದರಿಂದ ಜನಸಂಖ್ಯೆಯಲ್ಲಿ ಕಡಿಮೆ ಕಾಣುತ್ತಿದ್ದೇವೆ. ನಾವು ಹೀಗೆ ಬಿಡಿ ಬಿಡಿಯಾಗಿರುವುದರಿಂದ ಮತ್ತು ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದು ನಮ್ಮ ಹಿಂದುಳಿಯುವಿಕೆಗೆ ಕಾರಣವಾಗಿದೆ.

ನೂರಾರು ವರ್ಷಗಳಿಂದ ನಮ್ಮನ್ನು ಆಳಿದವರು ಯಾರು ಎನ್ನುವುದನ್ನು ಅರಿಯಬೇಕು. ಆಗ ನಾವೆಲ್ಲಾ ಒಂದಾಗಲು ಸಾಧ್ಯ. ನಮ್ಮಲ್ಲಿ ಒಗ್ಗಟ್ಟು ಮೂಡದೇ, ಶೈಕ್ಷಣಿಕ, ಆರ್ಥಿಕ,
ರಾಜಕೀಯ, ಸಾಮಾಜಿಕವಾಗಿ ಮುಂಚೂಣಿಗೆ ಬರಲು ಸಾಧ್ಯವಿಲ್ಲ ಎಂದರು.

ನಮ್ಮ ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು.
ಅವರು ಕೂಡ ಬೇರೆ ಸಮಾಜದ ವಿದ್ಯಾರ್ಥಿಗಳಂತೆ ಉನ್ನತ ವ್ಯಾಸಂಗ ಪಡೆದು ಉನ್ನತ ಸ್ಥಾನಮಾನಗಳನ್ನು ಗಳಿಸುವಂತಾಗಬೇಕು. ನಾವು ಸ್ವಾವಲಂಬಿಗಳಾಗಿ ಬದುಕವಂತಹ
ಜೀವನ ರೂಪಿಸಿಕೊಳ್ಳಬೇಕು. ಹಿಂದುಳಿದಿರುವ ನಮ್ಮ ಸಮಾಜಗಳನ್ನು ಮುಂದೆ ತರಲು ಪ್ರಯತ್ನಿಸುತ್ತಿರುವ ಮಠಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಮಾತನಾಡಿ, ಹಾಲುಮತ ಹಾಗೂ ಗಂಗಾಮತ ಎರಡೂ ಸಮಾಜಗಳಿಗೆ ಧಾರ್ಮಿಕ, ಸಾಂಸ್ಕೃತಿಕವಾಗಿ ದೊಡ್ಡ ಇತಿಹಾಸ ಇದೆ. ಕನಕದಾಸರು ಹಾಗೂ ಅಂಬಿಗರ ಚೌಡಯ್ಯ ನಡುವೆ ಸಾಮ್ಯತೆ ಇದೆ. 12ನೇ ಶತಮಾನದಲ್ಲಿ ಅಂಬಿಗರ ಚೌಡಯ್ಯ ಶೋಷಿತರನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಿದ್ದರೆ, ಕನಕದಾಸರು 16ನೇ ಶತಮಾನದಲ್ಲಿ ಜನರನ್ನು ಬಡಿದೆಬ್ಬಿಸುವ ಕೆಲಸ ಮಾಡಿದರು. ಇಬ್ಬರ ಆಸೆ ಹಾಗೂ ಜೀವನದಲ್ಲಿ ಸಾಮ್ಯತೆ ಇದೆ. ನಾವು ಅವರನ್ನು ಆದರ್ಶಗಳನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕು. ಆ ದಿಸೆಯಲ್ಲಿ ನಮ್ಮ ಮಠ
ಮಾನ್ಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

Advertisement

ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಅಲ್ಲಮಪ್ರಭು ಸಂಸ್ಥಾನ ಪೀಠದ ಶ್ರೀ ಮಲ್ಲಣ್ಣಪ್ಪ ಸ್ವಾಮೀಜಿ, ತಿಂಥಣಿ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದಪುರಿ
ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಸವಕಲ್ಯಾಣ ಶಾಸಕ ಬಿ.ನಾರಾಯಣ ಕಾರ್ಯಕ್ರಮ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next