ಜಾಲಹಳ್ಳಿ: ಸರಕಾರದ ಅನುದಾನಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಅನಂತರಾಜ ನಾಯಕ ಹೇಳಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ರಾಜೀವ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಕೆ.ಶಿವನಗೌಡ ನಾಯಕರು ಕ್ಷೇತ್ರದ ಅಭಿವೃದ್ಧಿ ಸುಮಾರು 600 ಕೋಟಿ ರೂ. ಅನುದಾನ ಮಂಜೂರಿ ಮಾಡಿಸಿದ್ದಾರೆ. ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಜನರು ವೈಯಕ್ತಿ ಕೆಲಸಕ್ಕಿಂತ ಗ್ರಾಮದಲ್ಲಿ ಆಗಬೇಕಾದ ಕಾಮಗಾರಿಗಳ ಬಗ್ಗೆ ಶಾಸಕರ ಗಮನಕ್ಕೆ ತರಬೇಕು. ಎಂಜಿಎನ್‌ಆರ್ ಇಜಿ ಯೋಜನೆಯಡಿ ತಾಲೂಕಿಗೆ ಮಾದರಿಯಾದ ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಿಸಿದ ಗ್ರಾಪಂ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ ಎಂದರು.
ತಾಪಂ ಅಧ್ಯಕ್ಷ ಹನುಮಂತ ಕಟ್ಟಿಮನಿ ಮಾತನಾಡಿ ತಾಲೂಕಿನಲ್ಲಿ ಜಾಲಹಳ್ಳಿ ಗ್ರಾಮ ಹೆಚ್ಚು ಅನುದಾನ ಪಡೆದಿದೆ. ಈ ಗ್ರಾಮಕ್ಕೆ ಶಾಸಕ ಕೆ.ಶಿವನಗೌಡ ನಾಯಕರು ಸುಮಾರು 20 ಕೋಟಿಗಿಂತ ಹೆಚ್ಚಿನ ಅನುದಾನ ನೀಡಿದ್ದಾರೆ. ಗ್ರಾಮದ ಎಲ್ಲ ವಾರ್ಡ್ ಗಳಲ್ಲಿ ಸಿಸಿ ರಸ್ತೆ, ಚರಂಡಿ, ಶಾಲಾ ಕಟ್ಟಡ, ಅಂಬಿಗೇರ ಚೌಡಯ್ಯ ಭವನ, ಗುಡಿ ಗುಂಡಾರಗಳ ಜೀರ್ಣೋದ್ಧಾರ ಕೈಗೊಂಡಿದ್ದಾರೆ ಎಂದರು.
ವಕೀಲ ವಾಸುದೇವ ಮಾತನಾಡಿ, ಸರಕಾರದ ಕಾರ್ಯಕ್ರಮಗಳಲ್ಲಿ ಅಧಿ ಕಾರಿಗಳು ಶಿಷ್ಟಾಚಾರ ಪಾಲಿಸಬೇಕು. ಜನಪ್ರತಿನಿಧಿಗಳ ಬದಲಿಗೆ ಅವರ ಸಂಬಂಧಿಗಳನ್ನು ಕೂಡ್ರಿಸುವುದು ಚುನಾಯಿತ ಸ್ಥಾನಗಳಿಗೆ ಅಗೌರವ ತೋರಿದಂತೆ ಆಗುತ್ತದೆ ಎಂದರು.
ಜಗದಾರಾಧ್ಯ ಜಯಶಾಂತಲಿಂಗೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ರಂಗಯ್ಯ ಮುರಾಳ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ವೀರಣ್ಣ ಪಾಣಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ನಾಡಗೌಡ, ತಾಪಂ ಸದಸ್ಯರಾದ ಗೋವಿಂದರಾಜ ನಾಯಕ ತಿಮ್ಮಾಪುರು, ಯಂಕಪ್ಪ ಮುರಾಳ, ಗ್ರಾಪಂ ಉಪಾಧ್ಯಕ್ಷೆ ತುಳಜಮ್ಮ ಗುಮೇದಾರ, ಕಾಂಗ್ರೆಸ್ ಮುಖಂಡ ಆದನಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಕೆರಿಲಿಂಗಪ್ಪ ನಾಡಗೌಡ, ತಾಪಂ ಮಾಜಿ ಸದಸ್ಯ ಬಸವರಾಜ ಹೇರುಂಡಿ, ಮುಖಂಡರಾದ ಅಮರೇಶ ಪಾಟೀಲ ಎನ್.ಲಿಂಗಪ್ಪ, ಯಲ್ಲಪ್ಪ ಚಪ್ಪಳಕಿ, ಗ್ರಾಪಂ ಪಿಡಿಒ ಪತ್ಯಪ್ಪ ರಾಠೊಡ, ಎನ್‌ಆರ್‌ಇಜಿ ಅಭಿಯಂತರರು, ಅಧಿಕಾರಿಗಳು ಉಪಸ್ಥಿತರಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರಾದ ಗಿರಿಜಮ್ಮ ಮೆಣಸಿನಕಾಯಿ, ಮೌಲಾನಬಿ, ರಂಗಣ್ಣ ಕೋಲ್ಕಾರ, ಯಲ್ಲಮ್ಮ ಚಪ್ಪಳಕಿ, ರಂಗನಾಥ ಮಕಾಸಿ, ಯಲ್ಲಮ್ಮ ಸಾಲಿ ಅವರನ್ನು ಸನ್ಮಾನಿಸಲಾಯಿತು .