Advertisement

ಪ್ರವಾಸಿ ತಾಣವಾಗುವುದೇ ಜಲದುರ್ಗ ಕೋಟೆ?

12:58 PM Oct 06, 2018 | |

ಲಿಂಗಸುಗೂರು: ತಾಲೂಕಿನ ಐತಿಹಾಸಿಕ ಜಲದುರ್ಗ ಕೋಟೆಗೆ ಪ್ರವಾಸೋದ್ಯಮ ಇಲಾಖೆ 1 ಕೋಟಿ ರೂ. ಮಂಜೂರು ಮಾಡಿದ್ದು, ಅವಸಾನದಂಚಿನಲ್ಲಿರುವ ಕೋಟೆ ಅಭಿವೃದ್ಧಿಗೊಂಡು ಪ್ರವಾಸಿಗರನ್ನು ಸೆಳೆಯುವ ನಿರೀಕ್ಷೆ ಗರಿಗೆದರಿವೆ. 

Advertisement

ತಾಲೂಕು ಕೇಂದ್ರ ಸ್ಥಾನದಿಂದ 18 ಕಿ.ಮೀ. ಅಂತರದಲ್ಲಿರುವ ಕೃಷ್ಣಾ ನದಿ ದಡದಲ್ಲಿರುವ ಜಲದುರ್ಗ ಕೋಟೆ ಪರಿಸರ ಪ್ರಿಯರನ್ನು ಸೆಳೆಯುತ್ತಿದೆ. ಆದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಯಾವುದೇ ಸೌಕರ್ಯ ಮತ್ತು ಕೋಟೆ ಅಭಿವೃದ್ಧಿಗೆ ಆಸಕ್ತಿ ತೋರದ್ದರಿಂದ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿಲ್ಲ. ಕೋಟೆಯ ಶಿಥಿಲ ಕಟ್ಟಡಗಳಿಗೆ ಕಾಯಕಲ್ಪ ನೀಡಿ, ಕೋಟೆ ಆವರಣದಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯ, ಉದ್ಯಾನ ಇತರೆ ಸೌಲಭ್ಯ ಒದಗಿಸಿದಲ್ಲಿ ಇದೊಂದು ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ.

ಜಲದುರ್ಗ ಕೋಟೆಯನ್ನು ದೇವಗಿರಿಯ ಯಾದವರು 12ನೇ ಶತಮಾನದಲ್ಲಿ ಕಟ್ಟಿಸಿರಬಹುದೆಂದು ಹೇಳಲಾಗುತ್ತಿದೆ. ಆದಿಲ್‌ಶಾಹಿಗಳ ವಾಸ್ತುಶಿಲ್ಪ ಎದ್ದು ಕಾಣುತ್ತಿದೆ. ಸುಮಾರು 400 ಅಡಿ ಎತ್ತರದ ಕೋಟೆಯ ಬುರುಜು ಕಟ್ಟಲಾಗಿದೆ. ಹಿಂದೆ ಅಪರಾಧಿಗಳನ್ನು ಕೋಟೆ ಬುರುಜು ಮೇಲಿಂದ ಕೃಷ್ಣಾ ನದಿಗೆ ನೂಕಿ ಶಿಕ್ಷೆ ಕೊಡುತ್ತಿದ್ದರೆಂದು ಹೇಳಲಾಗುತ್ತಿದೆ. ಈ ಕೋಟೆಯ ಸುತ್ತಲೂ ಕೃಷ್ಣಾ ನದಿ ಕವಲೊಡೆದು ಹರಿಯುತ್ತಿದ್ದರಿಂದ ಜಲದುರ್ಗ ಕೋಟೆ ಅತ್ಯಂತ ರಕ್ಷಣಾ ಕೋಟೆಯಾಗಿತ್ತು.

ಆಕ್ರಮಣ: ಪ್ರಾಚೀನ ಸ್ಮಾರಕಗಳು ಮತ್ತು ಐತಿಹಾಸಿಕ ತಾಣಗಳ ಸಂರಕ್ಷಣಾ ಕಾಯ್ದೆ ಪ್ರಕಾರ ಯಾವುದೇ ಐತಿಹಾಸಿಕ ತಾಣಗಳ 100 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಹಾಗೂ ಖಾಸಗಿ ವ್ಯಕ್ತಿಗಳು ವಾಸಿಸುವಂತಿಲ್ಲ. ಅಲ್ಲದೆ ಸ್ಮಾರಕದ 200 ಮೀಟರ್‌ ವ್ಯಾಪ್ತಿ ನಿರ್ಬಂಧಿ ತ ಪ್ರದೇಶ ಉಲ್ಲಂಘಿಸಿದರೆ ಶಿಕ್ಷಾರ್ಹ ಅಪರಾಧ ಎಂಬ ಕಾನೂನುಗಳಿದ್ದರೂ ಅದು ಕೇವಲ ಕಾಗದದಲ್ಲಿ ಮಾತ್ರ ಎನ್ನುವಂತಾಗಿದೆ. ಈ ಕೋಟೆಗಳಲ್ಲಿ ಜನ ಕಟ್ಟಡಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿಕೊಂಡ ಸ್ಮಾರಕಗಳ ಜಾಗಗಳನ್ನು ವಶಕ್ಕೆ ಪಡೆಯಲು ಪುರಾತತ್ವ ಸರ್ವೇಕ್ಷಣಾ ಇಲಾಖೆ ಜಲದುರ್ಗ ಕೋಟೆಯತ್ತ ಇದುವರೆಗೂ ಗಮನಹರಿಸಿಲ್ಲ.

ನಾಮಫಲಕವೇ ಇಲ್ಲ: ತಾಲೂಕು ಕೇಂದ್ರ ಸ್ಥಾನದಿಂದ ಜಲದುರ್ಗ ಕೋಟೆವರೆಗೂ ಮಾರ್ಗಸೂಚಿ ನಾಮಫಲಕವೇ ಇಲ್ಲ. ಪ್ರವಾಸೋದ್ಯಮ ಇಲಾಖೆ ರಾಜ್ಯದ ನಾನಾ ಸ್ಥಳಗಳಲ್ಲಿ ನಾಮಫಲಕ ಹಾಕಿದೆ. ಆದರೆ ಐತಿಹಾಸಿಕ ಜಲದುರ್ಗ ಕೋಟೆಗೆ ಮಾರ್ಗ ತೋರುವ ಫಲಕಗಳು ಇಲ್ಲದಾಗಿದೆ. ಹೀಗಾಗಿ ಈ ಕೋಟೆ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ಕೊರತೆ ಕಾಡುತ್ತಿದೆ. ಕೋಟೆಯ ಕೆಲವೆಡೆ ಗೋಡೆಗಳು ಕುಸಿದಿವೆ. ಅದನ್ನು ಪುನರುಜ್ಜೀವನಗೊಳಿಸಲು ಪುರಾತತ್ವ ಮತ್ತು ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯವಹಿಸಿದೆ. ಸರ್ಕಾರ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿರುವ ಕೋಟೆಗಳನ್ನು ಅಭಿವೃದ್ಧಿಪಡಿಸಲು ತೋರಿದ ಆಸಕ್ತಿಯನ್ನು ಜಲದುರ್ಗ ಕೋಟೆಗೆ ತೋರುತ್ತಿಲ್ಲ ಎಂಬುದು ಇಲ್ಲಿನ ಜನರ ಆರೋಪವಾಗಿದೆ.

Advertisement

ರಸ್ತೆ ಅಭಿವೃದ್ಧಿ: 2012-13ನೇ ಸಾಲಿನಲ್ಲಿ ಆಗಿನ ಶಾಸಕ ಮಾನಪ್ಪ ವಜ್ಜಲ್‌ ಅವರು 3.60 ಕೋಟಿ ರೂ. ಅನುದಾನ ತಂದು ರಸ್ತೆ ಅಭಿವೃದ್ಧಿ, ನದಿಗೆ ತಡೆಗೋಡೆ, ಸಿಸಿ ರಸ್ತೆ ನಿರ್ಮಿಸಿದ್ದಾರೆ. ಈಗಿನ ಶಾಸಕ ಡಿ.ಎಸ್‌.ಹೂಲಗೇರಿ ಅವರು ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆ. ಇದನ್ನು ಅಗತ್ಯ ಕೆಲಸಗಳಿಗೆ ಬಳಕೆ ಮಾಡಬೇಕಾದ ಅಗತ್ಯವಿದೆ

ಐತಿಹಾಸಿಕ ತಾಣದಲ್ಲಿ ಆಗಬೇಕಿರುವುದೇನು..? ಕೋಟೆಗೆ ಬರುವ ಅನೇಕ ಪ್ರವಾಸಿಗರಿಗೆ ಮೂಲ ಸೌಕರ್ಯಗಳೇ ಇಲ್ಲದಂತಾಗಿದೆ. ಕೋಟೆ ಪಕ್ಕವೇ ನದಿ ಹರಿಯುತ್ತಿದ್ದರೂ ಕೋಟೆಗೆ ಆಗಮಿಸುವ ಪ್ರವಾಸಿಗರಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಹೀಗಾಗಿ ಪ್ರವಾಸಿಗರು ನೀರಿನ ಬಾಟಲಿ ಹಿಡಿದುಕೊಂಡೇ ಕೋಟೆ ನೋಡಲು ಬರಬೇಕಾದ ಅನಿವಾರ್ಯತೆ ಇದೆ. ಕೋಟೆಯ ಮೇಲೆ ಅಪಾಯ ಮಟ್ಟ ಇರುವುದರಿಂದ ಕೆಲವೆಡೆ ತಡೆಗೋಡೆ ನಿರ್ಮಿಸಬೇಕಾಗಿದೆ.

ಕೋಟೆ ಕಾವಲು ಗೋಪುರದಲ್ಲಿ ಸುತ್ತಲಿನ ಪ್ರಕೃತಿ ಸೌಂದರ್ಯ ವೀಕ್ಷಿಸಲು ವೀಕ್ಷಣಾ ಗೋಪುರ ನಿರ್ಮಿಸಬೇಕಿದೆ. ಕೋಟೆಯ ಹೊರಭಾಗದಲ್ಲಿರುವ ಜಾಗೆಯಲ್ಲಿ ಜಾಲಿಗಿಡಿಗಳ ಹೇರಳವಾಗಿ ಬೆಳೆದಿದ್ದು, ಕೋಟೆ ಸೌಂದರ್ಯ ಮರೆಮಾಚಿದೆ. ಹೀಗಾಗಿ ಪ್ರವಾಸಿಗರನ್ನು ಸೆಳೆಯಲು ಸುಂದರ ಉದ್ಯಾನ ನಿರ್ಮಿಸಬೇಕಿದೆ. ಇದಲ್ಲದೆ ಪ್ರವಾಸಿಗರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಿಸಬೇಕಿದೆ. ಕೋಟೆಗೆ ಆಗಮಿಸುವ ಪ್ರವಾಸಿಗರಿಗೆ ತಾಲೂಕು ಕೇಂದ್ರದಿಂದ ಸಾರಿಗೆ ಸೌಲಭ್ಯ ಕಲ್ಪಿಸಬೇಕಿದೆ. ಇದಲ್ಲದೆ ಕೋಟೆ ಒಳಗೆ ಹಾಗೂ ಹೊರಗೆ ವಿದ್ಯುತ್‌ ದೀಪಗಳನ್ನು ಅಳವಡಿಸಿ ಕೋಟೆ ಸೌಂದರಿಕರಣಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಬೇಕು ಎನ್ನುತ್ತಾರೆ ಸಾರ್ವಜನಿಕರು.

ಐತಿಹಾಸಿಕ ಕೋಟೆ ನೋಡಲು ನಿತ್ಯವೂ ಪ್ರವಾಸಿಗರು ಬರುತ್ತಾರೆ. ಆದರೆ ಸೌಲಭ್ಯ ಇಲ್ಲದೆ ಪರದಾಡುತ್ತಾರೆ. ಸರ್ಕಾರ ಇಲ್ಲಿ ಅಗತ್ಯ ಸೌಲಭ್ಯ ಒದಗಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುಬಹುದು.  ತಿರುಪತಿ ಉಪ್ಪಾರ, ಸ್ಥಳೀಯ ನಿವಾಸಿ ಜಲದುರ್ಗ ಕೋಟೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಪ್ರವಾಸೋದ್ಯಮ ಇಲಾಖೆ ಸಚಿವರಿಗೆ ಮನವಿ ಮಾಡಿದ್ದೆ. ಸಚಿವರು ಒಂದು ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆ. ಈ ಅನುದಾನದಲ್ಲಿ ಜಲದುರ್ಗದಲ್ಲಿ ಏನು ಕೆಲಸ ಅಗತ್ಯವಿದೆಯೋ ಅದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.
  ಡಿ.ಎಸ್‌.ಹೂಲಗೇರಿ, ಶಾಸಕರು ಲಿಂಗಸುಗೂರು.

Advertisement

Udayavani is now on Telegram. Click here to join our channel and stay updated with the latest news.

Next