Advertisement

ನೀರಿನ ಸಮಸ್ಯೆಗೆ ಜಲಧಾರಾ ಪರಿಹಾರ

10:39 AM Aug 02, 2019 | Team Udayavani |

ಶಿರಸಿ: ವರದಾ ನದಿ ದಂಡೆಯ ಮೇಲಿದ್ದರೂ ತಾಲೂಕಿನ ಬನವಾಸಿಯ ಜನತೆ ಬೇಸಿಗೆ ಬಂದರೆ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ. ಈಗ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಜಲಧಾರಾ ಯೋಜನೆ ಸರ್ವೇ ಕಾರ್ಯ ನಡೆದಿದ್ದು, ಬನವಾಸಿ ಜನತೆಯಲ್ಲಿ ಆಶಾಭಾವ ಮೂಡಿದೆ.

Advertisement

8 ಸಾವಿರ ಜನರಿರುವ ಬನವಾಸಿಗೆ ಕುಡಿಯುವ ನೀರು ಪೂರೈಸುವುದು ದೊಡ್ಡ ಸಮಸ್ಯೆಯಾಗಿತ್ತು. ಇಲ್ಲಿ 2147 ಮನೆಗಳಿದ್ದರೂ ಬನವಾಸಿ ಗ್ರಾಪಂ 547 ಮನೆಗಳಿಗಷ್ಟೇ ನಲ್ಲಿ ನೀರು ಒದಗಿಸಿತ್ತು. 106 ಸಾರ್ವಜನಿಕ ನಲ್ಲಿಯ ಮುಂದೆ ಉಳಿದವರು ಕೊಡ ಹಿಡಿದು ನಿಲ್ಲಬೇಕಿತ್ತು. ಹೊಸ ನಲ್ಲಿ ಸಂಪರ್ಕಕ್ಕೆ ಸಾರ್ವಜನಿಕರಿಂದ ಅರ್ಜಿ ಬಂದರೂ ಅದನ್ನು ಈಡೇರಿಸಲು ಗ್ರಾಪಂನಿಂದ ಸಾಧ್ಯವಾಗಿರಲಿಲ್ಲ. ಇಲ್ಲಿಯ ಮಧುಕೇಶ್ವರ ದೇವಾಲಯದ ಬಳಿ ವರದಾ ನದಿಯಿಂದ ಮತ್ತು ಎರಡು ಬೋರ್‌ವೆಲ್ ಮೂಲಕ ನೀರು ಸಂಗ್ರಹಿಸಿ ಬನವಾಸಿ ಜನತೆಗೆ ಪೂರೈಸುವಷ್ಟರಲ್ಲಿ ಇಲ್ಲಿಯ ಗ್ರಾಪಂ ಹೈರಾಣಾಗುತ್ತಿತ್ತು.

ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವರದಾ ನದಿ ನೀರು ಬತ್ತುತ್ತಿದ್ದ ಕಾರಣ ನೀರು ಸರಬರಾಜು ಮಾಡುತ್ತಿದ್ದ ಪಂಪ್‌ಗ್ಳ ಜಾಕ್‌ವೆಲ್ ಮಟ್ಟಕ್ಕಿಂತ ನೀರು ಕೆಳಗಿಳಿದು ಗ್ರಾಪಂ ಅಸಹಾಯಕತೆ ವ್ಯಕ್ತಪಡಿಸುವ ಸ್ಥಿತಿ ಉಂಟಾಗುತ್ತಿತ್ತು.

ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ರಾಜ್ಯ ಸರ್ಕಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ-2 ಅಡಿಯಲ್ಲಿ ಕಳೆದ ವರ್ಷ 95 ಲಕ್ಷ ರೂ. ಬಿಡುಗಡೆ ಮಾಡಿದೆ. ಆದರೆ, ಈ ಹಣದಲ್ಲಿ ಕೈಗೊಳ್ಳುವ ಕಾಮಗಾರಿ ಬನವಾಸಿಯ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವಂತಿರಲಿಲ್ಲ. ಹೀಗಾಗಿ, ಬನವಾಸಿಗೆ ಕುಡಿಯುವ ನೀರಿನ ಯೋಜನೆಯನ್ನು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಸೇರಿಸಲಾಗಿದೆ.

ಇದುವರೆಗೂ ನೀರು ಸಂಗ್ರಹಿಸುತ್ತಿದ್ದ ಜಾಗದ ಬದಲು ಜಲಧಾರಾ ಯೋಜನೆಯಲ್ಲಿ ಹೊಸ ಸ್ಥಳ ಗುರುತಿಸಲಾಗಿದೆ. ಒಟ್ಟು 2.5 ಕೋಟಿ ರೂ. ಈ ಯೋಜನೆಯಲ್ಲಿ ತಿಗಣಿಯಲ್ಲಿ ವರದಾ ನದಿಗೆ ಚೆಕ್‌ ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತಿದೆ. ಅಲ್ಲಿಂದ 2 ಕಿಮೀ ದೂರದ ಬನವಾಸಿಗೆ ಪೈಪ್‌ ಮೂಲಕ ನೀರು ತಂದು 1.5 ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಈ ಟ್ಯಾಂಕ್‌ನಿಂದ ಬನವಾಸಿಯ ಎಲ್ಲ ಮನೆಗಳಿಗೆ ಪೈಪ್‌ಲೈನ್‌ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತದೆ. ಯೋಜನೆ ಜಾರಿಯಾದ ಬಳಿಕ ಬನವಾಸಿಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next