Advertisement
ಹೌದು, ಜಿಲ್ಲೆಯಲ್ಲಿ ಈಗಾಗಲೇ ಕೈಗೊಂಡ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳ ಕುರಿತು ಹಲವಾರು ತಕರಾರು ಇವೆ. ಒಂದು ಯೋಜನೆ ಕೈಗೊಳ್ಳಲು ಮುಖ್ಯವಾಗಿ ಇರಬೇಕಿರುವ ಜಲಮೂಲವನ್ನೇ ಮರೆತು ಕೋಟ್ಯಂತರ ಖರ್ಚು ಮಾಡಿ, ಯೋಜನೆ ಹಳ್ಳ ಹಿಡಿಸಿದ ಪ್ರಸಂಗ ಜಿಲ್ಲೆಯಲ್ಲಿ ನಡೆದಿವೆ. ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ, ಜಲ ಶುದ್ಧೀಕರಣ ಘಟಕ ಹೀಗೆ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳು, ಗುತ್ತಿಗೆದಾರರು ತೋರುವ ಅತಿಯಾದ ಕಾಳಜಿ, ಜನರಿಗೆ ನೀರು ಪೂರೈಸುವ ನಿಟ್ಟಿನಲ್ಲಿ ತೋರಿಸಿಲ್ಲ. ಹೀಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಜಂಟಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ಜಲ ಜೀವನ ಮಿಷನ್ ಯೋಜನೆ, ಎಂವಿಎಸ್ ರೀತಿ ಆಗದೇ, ಹಳ್ಳಿ ಜನರಿಗೆ ನೀರು ಕೊಡುವಂತಾಗಬೇಕು ಎಂಬುದು ಜನರ ಒತ್ತಾಯ.
Related Articles
Advertisement
ಹಳ್ಳ ಹಿಡಿದ ಹಳ್ಳಿ ಯೋಜನೆಗಳು : ಜಿಲ್ಲೆಯಲ್ಲಿ ಈಗಾಗಲೇ 41 ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳಿದ್ದು, ಅದರಲ್ಲಿ 39 ಯೋಜನೆ ಚಾಲ್ತಿ ಇವೆ. ಅವುಗಳ ಮೂಲಕ 361 ಹಳ್ಳಿಗೆ ನೀರು ಕೊಡುತ್ತಿದ್ದೇವೆ. 2 ಯೋಜನೆಗಳು, ಜಲಮೂಲವಿಲ್ಲದ ಕಾರಣ ವಿಫಲವಾಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ವಾಸ್ತವದಲ್ಲಿ 361 ಹಳ್ಳಿಗೂ ಸರಿಯಾಗಿ ನೀರು ಹೋಗುತ್ತಿಲ್ಲ. ಇಸ್ಲಾಂಪುರ, ಕಟಗೇರಿ-ಅನವಾಲ, ಕನ್ನೊಳ್ಳಿ-ಗದ್ಯಾಳ, ಮೆಟಗುಡ್ಡ ಹೀಗೆ ಹಲವು ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಸಫಲವಾಗಿಲ್ಲ. ಇಸ್ಲಾಂಪುರ, ಇಲ್ಯಾಳ ಬಹುಹಳ್ಳಿ ಯೋಜನೆ, ಐಹೊಳೆ ಮತ್ತು ಇತರೆ ಬಹುಹಳ್ಳಿ ಯೋಜನೆ ಕುರಿತು ಐದು ವರ್ಷಗಳ ಕಾಲ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗುತ್ತಲೇ ಇವೆ.
ಗ್ರಾಮೀಣ ಭಾಗದ 3,07,314 ಮನೆಗಳಿಗೆ ನಳದ ಸಂಪರ್ಕ ಕಲ್ಪಿಸಿ ಕುಡಿಯುವ ನೀರು ಪೂರೈಕೆಗೆ ಕೇಂದ್ರ-ರಾಜ್ಯ ಸರ್ಕಾರಗಳ ಜಂಟಿ ಅನುದಾನದಲ್ಲಿ ಜಲ ಜೀವನ ಮಿಷನ್ ಯೋಜನೆ ಜಾರಿಗೊಳಿಸಿದ್ದು, ಇದಕ್ಕಾಗಿ 336.935 ಕೋಟಿ ಮೊತ್ತದ ಕ್ರಿಯಾ ಯೋಜನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. -ಗಂಗೂಬಾಯಿ ಮಾನಕರ, ಜಿಲ್ಲಾ ಪಂಚಾಯತ್ ಸಿಇಒ
ಜಿಲ್ಲೆಯಲ್ಲಿ 41 ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳಿದ್ದು, ಅದರಲ್ಲಿ ಎರಡು ವಿಫಲವಾಗಿವೆ. 39 ಯೋಜನೆಗಳ ಮೂಲಕ ನೀರು ಕೊಡಲಾಗುತ್ತಿದ್ದು, ಅವುಗಳ ಅಡಿಯಲ್ಲಿಯೇ ಇನ್ನುಳಿದ ಹಳ್ಳಿಯ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುವುದು. ಮೀಟರ್ ಅಳವಡಿಕೆಯೂ ಈ ಯೋಜನೆಯಡಿ ಇದ್ದು, ನೀರು ಪೋಲಾಗುವುದಿಲ್ಲ. ಇದೊಂದು ಮಹತ್ವದ ಯೋಜನೆಯಾಗಿದ್ದು, ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಲಾಗುವುದು.-ಆರ್.ಎನ್. ಪುರೋಹಿತ, ಕಾರ್ಯನಿರ್ವಾಹಕ ಅಭಿಯಂತರ, ಆರ್‌ಡಬ್ಲ್ಯೂಎಸ್
-ಶ್ರೀಶೈಲ ಕೆ. ಬಿರಾದಾರ