ಬಂಟ್ವಾಳ: ಜಕ್ರಿಬೆಟ್ಟುವಿನಲ್ಲಿ ಲೊರೆಟ್ಟೋ- ಅಗ್ರಾರ್ ಭಾಗದಿಂದ ಆಗಮಿಸಿದ ವಾಹನಗಳು ಬಂಟ್ವಾಳ ಪೇಟೆಗೆ ತೆರಳುವ ಭಾಗದಲ್ಲಿ ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಹಾಗೇ ಬಿಡಲಾಗಿದ್ದು, ಇದೀಗ ಆ ಪ್ರದೇಶವು ವಾಹನಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಈಗಾಗಲೇ ಹಲವು ವಾಹನಗಳು ಹೊಂಡಕ್ಕೆ ಬಿದ್ದಿವೆ.
ಹೆದ್ದಾರಿ ಕಾಮಗಾರಿಯ ವೇಳೆ ಒಳಸಂಪರ್ಕ ರಸ್ತೆಗಳನ್ನು ಅಗೆದು ಮತ್ತೆ ಡಾಮರು ಹಾಕಿ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಆದರೆ ಜಕ್ರಿಬೆಟ್ಟುವಿನಲ್ಲಿ ಪೇಟೆಗೆ ತೆರಳುವ ರಸ್ತೆಯಲ್ಲಿ ಚರಂಡಿಯನ್ನು ಅರ್ಧಕ್ಕೆ ನಿಲ್ಲಿಸಿರುವ ಪರಿಣಾಮ ಪ್ರಸ್ತುತ ಇಳಿಜಾರಿನ ಸಮಸ್ಯೆ ಸೃಷ್ಟಿಯಾಗಿದೆ. ಜತೆಗೆ ಅಲ್ಲಿ ವ್ಯವಸ್ಥಿತ ರೀತಿಯಲ್ಲಿ ಡಾಮರು ಹಾಕದೆಯೂ ತೊಂದರೆ ಉಂಟಾಗಿದೆ.
ಜಕ್ರಿಬೆಟ್ಟು ಹೆದ್ದಾರಿಯಿಂದ ಪೇಟೆಗೆ ತೆರಳುವ ಈ ರಸ್ತೆಯಲ್ಲಿ ವಾಹನ ಚಾಲಕರು ಇಳಿಜಾರಿನ ಹೊಂಡ ಇರುವುದು ಗಮನಕ್ಕೆ ಬಾರದೆ ವಾಹನ ಇಳಿಸಿ ಸಾಕಷ್ಟು ವಾಹನಗಳು ಜಖಂಗೊಂಡಿದ್ದವು. ಕಾರಿನಂತಹ ವಾಹನಗಳಿಗೆ ಇಳಿಜಾರು ಪ್ರದೇಶ ಸಾಕಷ್ಟು ಹಾನಿ ಮಾಡುತ್ತಿದ್ದು, ಎದುರಿನಿಂದ ವಾಹನ ಬಂದಾಗ ಸೈಡ್ ಕೊಡುವ ಸಂದರ್ಭದಲ್ಲೂ ಹೆಚ್ಚು ಜಾಗರೂಕರಾಗಬೇಕಿದೆ.
ಹೆದ್ದಾರಿಯ ಚರಂಡಿಯನ್ನು ಪೇಟೆಗೆ ತೆರಳುವ ರಸ್ತೆಯಲ್ಲಿ ಅರ್ಧಕ್ಕೆ ನಿಲ್ಲಿಸುವ ಸಂದರ್ಭ ಚರಂಡಿಯ ಕಾಂಕ್ರೀಟ್ ಹಾಗೂ ರಸ್ತೆಯ ಡಾಮರನ್ನು ಇಳಿಜಾರು ಮಾದರಿಯಲ್ಲೇ ಹಾಕಿದ್ದರೆ ತೊಂದರೆ ಇರಲಿಲ್ಲ. ಆದರೆ ಡಾಮರು ಕೂಡ ಅರ್ಧಕ್ಕೆ ನಿಂತಿದ್ದು, ರಸ್ತೆಯ ಡಾಮರು ಕೂಡ ಎದ್ದು ಹೋಗುವ ಭೀತಿ ಎದುರಾಗಿದೆ.
ಬೆಳ್ತಂಗಡಿ ಭಾಗದಿಂದ ಆಗಮಿಸಿದ ವಾಹನಗಳು ಬಂಟ್ವಾಳ ಪೇಟೆಗೆ ತಿರುಗುವ ಹಾಗೂ ಪೇಟೆಯಿಂದ ಬಂದ ವಾಹನಗಳು ಬೆಳ್ತಂಗಡಿ ಭಾಗಕ್ಕೆ ಹೆದ್ದಾರಿ ಸೇರುವ ಸ್ಥಳದಲ್ಲಿ ಅಪಘಾತ ತಪ್ಪಿಸುವ ದೃಷ್ಟಿಯಿಂದ ಪ್ರಸ್ತುತ ಸರ್ಕಲ್ ಮಾದರಿ ನಿರ್ಮಿಸಲಾಗಿದೆ. ಆದರೆ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಸಾಗುತ್ತಿರುವುದರಿಂದ ಸರ್ಕಲ್ ನಿರ್ಮಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಹೆದ್ದಾರಿಯಲ್ಲೇ ಬ್ಯಾರಿಕೇಡ್ ಇಟ್ಟು ವಾಹನ ನಿಯಂತ್ರಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.