ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ರಾಜಕಾರಣಿಗಳು, ಅಧಿಕಾರ ಶಾಹಿಗಳು, ಉದ್ಯಮಿಗಳಿಂದ ಮುಕ್ತ ಮಾಡಬೇಕೆನ್ನುವುದು ಸರ್ವೋಚ್ಚ ನ್ಯಾಯಾಲಯದ ನಿಲುವು. ಅದಕ್ಕಾಗಿಯೇ ಲೋಧಾ ಸಮಿತಿ ಸಿದ್ಧಪಡಿಸಿದ್ದ ಹಲವಾರು ಶಿಫಾರಸುಗಳಿಗೆ ಸಮ್ಮತಿ ನೀಡಿತ್ತು. ಅದರ ಬಗ್ಗೆ ಈಗಲೂ ಬಿಸಿಸಿಐನ ಬಹುತೇಕ ಪಟ್ಟ ಭದ್ರರಿಗೆ ತಕರಾರಿದೆ ಎನ್ನುವುದು ಬೇರೆ ಮಾತು. ಆದರೆ ಸರ್ವೋಚ್ಚ ನ್ಯಾಯಾಲಯದ ಈ ಕ್ರಮ ಶ್ಲಾಘ್ಯ ಎನ್ನುವುದಂತೂ ಸತ್ಯ. ಲೋಧಾ ಸಮಿತಿ ಶಿಫಾರಸನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುವುದು ಅಸಾಧ್ಯ ಎಂದು ಬಿಸಿಸಿಐ ಹೇಳುವುದು ಸರಿಯೂ ಹೌದು. ಉದಾಹರಣೆಗೆ ಐಪಿಎಲ್‌ಗಾಗಿಯೇ ಒಂದು ಸ್ವಾಯುತ್ತ, ಸ್ವತಂತ್ರ ಆಡಳಿತ ಮಂಡಳಿ ರಚಿಸಬೇಕೆನ್ನುವುದನ್ನು ಒಪ್ಪುವುದು ಕಷ್ಟ. ಐಪಿಎಲ್, ಬಿಸಿಸಿಐನ ಕೂಸಾಗಿರುವಾಗ ಅದನ್ನು ಸ್ವತಂತ್ರವಾಗಿ ಬಿಟ್ಟರೆ ದೇಶದಲ್ಲಿ ಎರಡು ಕ್ರಿಕೆಟ್ ಶಕ್ತಿಕೇಂದ್ರಗಳು ಹುಟ್ಟಿಕೊಳ್ಳುತ್ತವೆ! ಇದು ವಾಸ್ತವಿಕವಾಗಿ ಎದುರಾಗುವ ಸಮಸ್ಯೆ. ಅದೇನಾದರೂ ಇರಲಿ ಕ್ರಿಕೆಟ್ ಆಡಳಿತದಲ್ಲಿ ಕ್ರಿಕೆಟಿಗರಿಗೆ ಗರಿಷ್ಠ ಆದ್ಯತೆಯಿರಬೇಕು ಎನ್ನುವ ಶಿಫಾರಸು ಹೇಗೆ ತಪ್ಪಾಗಲು ಸಾಧ್ಯ?
ಸದ್ಯ ಈ ಎಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣ, ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಮತ್ತು ದಿಲ್ಲಿ ಕ್ರಿಕೆಟ್ ಸಂಸ್ಥೆ ನಡುವೆ ಶುರುವಾಗಿರುವ ಜಗಳ. ದಿಲ್ಲಿ ಸಂಸ್ಥೆ ಅಧೀನದ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ದಿಲ್ಲಿ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿಯ ಪ್ರತಿಮೆ ಅನಾವರಣ ಮಾಡಲು, ಪ್ರಸ್ತುತ ಅಧ್ಯಕ್ಷ ರೋಹನ್ ಜೇಟ್ಲಿ ತೀರ್ಮಾನಿಸಿದ್ದಾರೆ. ರೋಹನ್, ಅರುಣ್ ಜೇಟ್ಲಿ ಪುತ್ರನೆನ್ನು ವುದನ್ನು ಇಲ್ಲಿ ಗಮನಿಸಬೇಕು! ಜೇಟ್ಲಿ 1999ರಿಂದ 2013ರವರೆಗೆ ದಿಲ್ಲಿ ಕ್ರಿಕೆಟನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅವರ ಬಗ್ಗೆ ಬಹುತೇಕರಿಗೆ ಗೌರವವಿದೆ. ಆದರೆ ಬಿಷನ್ ಸಿಂಗ್ ಬೇಡಿ, ಕ್ರಿಕೆಟ್ ವ್ಯವಸ್ಥೆಯಲ್ಲಿ ಕ್ರಿಕೆಟಿಗರಿಗಿಂತ ಆಡಳಿತಗಾರರಿಗೆ ಗೌರವ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ಅದು ಸತ್ಯ ಕೂಡಾ. ಕ್ರಿಕೆಟ್ ವ್ಯವಸ್ಥೆ ಇರಬೇಕಾದದ್ದೇ ಯೋಗ್ಯ ಕ್ರಿಕೆಟಿಗರ ಬಳಿ. ಆದರೆ ಪ್ರಸ್ತುತ ಭಾರತೀಯ ಕ್ರಿಕೆಟ್ ವ್ಯವಸ್ಥೆಯಲ್ಲಿ ಉದ್ಯಮಿಗಳು, ರಾಜಕಾರಣಿಗಳೇ ತುಂಬಿಕೊಂಡಿದ್ದಾರೆ. ಅದು ಹಿಂದಿನಿಂದಲೂ ಬಂದ ಪರಂಪರೆ.
ಬಹಳ ಹಿಂದೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಬಿಸಿಸಿಐ ಅಧ್ಯಕ್ಷರಾಗಿದ್ದರು. ಕೆಲವು ವರ್ಷಗಳ ಹಿಂದೆ ಬಿಜೆಪಿ ನಾಯಕ, ಸಂಸದ ಅನುರಾಗ್ ಠಾಕೂರ್ ಮೊದಲು ಕಾರ್ಯದರ್ಶಿಯಾಗಿ, ಆಮೇಲೆ ಅಧ್ಯಕ್ಷರಾಗಿದ್ದರು. ಸರ್ವೋಚ್ಚ ನ್ಯಾಯಾಲಯ ಅವರನ್ನು ಪದಚ್ಯುತಗೊಳಿಸಿತು. ಅದಕ್ಕೂ ಮುನ್ನ ಇಂಡಿಯಾ ಸಿಮೆಂಟ್ಸ್ ಮುಖ್ಯಸ್ಥ ಎನ್. ಶ್ರೀನಿವಾಸನ್‌ರನ್ನು ಅಧ್ಯಕ್ಷ ಸ್ಥಾನದಿಂದ ಹೊರಹಾಕಿತ್ತು. ಪ್ರಸ್ತುತ ಬಿಸಿಸಿಐ ಕಾರ್ಯದರ್ಶಿಯಾಗಿರುವುದು ಗೃಹ ಸಚಿವ ಅಮಿತ್ ಶಾ
ಪುತ್ರ ಜಯ್ ಶಾ, ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲ ಉಪಾಧ್ಯಕ್ಷ! ಅಲ್ಲಿಗೆ ಪರೋಕ್ಷವಾಗಿ ಆಡಳಿತದಲ್ಲಿ ವೃತ್ತಿಪರತೆ ತರಬೇಕು, ರಾಜಕೀಯ ತೊಲಗಿಸಬೇಕು ಎಂಬ ಸರ್ವೋಚ್ಚ ನ್ಯಾಯಾಲಯದ ಉದ್ದೇಶವೇ ದಾರಿ ತಪ್ಪಿದಂತಾಗಿದೆ. ಈ ಹಿನ್ನೆಲೆಯಲ್ಲಿ ಜೇಟಿÉ ಪ್ರತಿಮೆ ಸ್ಥಾಪಿಸಬಾರದೆಂಬ ಬಿಷನ್ ಸಿಂಗ್ ಆಗ್ರಹ ಮಹತ್ವ ಹೊಂದಿದೆ. ಸ್ವತಃ ಬಿಸಿಸಿಐ ಸಂವಿಧಾನದಲ್ಲೇ ಸಚಿವರು, ಸರಕಾರಿ ಹುದ್ದೆಯಲ್ಲಿರುವ ಆಡಳಿತದಲ್ಲಿರುವಂತಿಲ್ಲ ಎನ್ನಲಾಗಿದೆ. ಆದರೆ ರಾಜಕಾರಣಿಗಳು ವಿವಿಧ
ರೂಪದಲಿ ನುಸುಳುತ್ತಿದ್ದಾರೆ! ಇಲ್ಲಿ ಯಾವುದೇ ವ್ಯಕ್ತಿ ಮುಖ್ಯವಲ್ಲ, ಕ್ರಿಕೆಟನ್ನು ಒಂದು ವ್ಯವಸ್ಥೆಯಾಗಿ ನೋಡಿದರೆ ಅಲ್ಲಿ ಸ್ವಹಿತಾಸಕ್ತಿ ಇರಬಾರದು. ಇದ್ದರೆ ಅದರಿಂದ ಅಗಣಿತ ಸಂಖ್ಯೆಯ ಪ್ರತಿಭೆಗಳಿಗೆ ಅನ್ಯಾಯವಾಗುತ್ತದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜಕಾರಣಿಗಳ ಪ್ರತಿಮೆ ಅನಾವರಣ ಮಾಡುವುದು, ಪರೋಕ್ಷವಾಗಿ ಅವರ ಹಿಡಿತಕ್ಕೆ ಅವಕಾಶ ಕೊಡುವುದನ್ನು ನಿಲ್ಲಿಸಬೇಕು. ಕ್ರಿಕೆಟ್ ಆಟಕ್ಕೆ ಕ್ರಿಕೆಟಿಗರೇ ಆಡಳಿತಗಾರರಾಗಬೇಕು.