ನವದೆಹಲಿ: ನಾನು ದೇಶ ತೊರೆಯುವ ಮುನ್ನ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿದ್ದೆ ಎಂದು ಭಾರತದ ಬ್ಯಾಂಕ್ ಗಳಿಗೆ 9 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡು ಲಂಡನ್ ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಹೇಳಿಕೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಜೇಟ್ಲಿ ಹಾಗೂ ಮದ್ಯದ ದೊರೆ ಮಲ್ಯ ನಡುವೆ ಒಳಒಪ್ಪಂದ ನಡೆದಿದೆ. ಈ ಹಿನ್ನೆಲೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ಇಂದು 2ನೇ ಬಾರಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು, ಮದ್ಯದ ದೊರೆ ವಿಜಯ್ ಮಲ್ಯ ದೇಶ ತೊರೆಯುವ 2 ದಿನದ ಮೊದಲು ಸಂಸತ್ ನಲ್ಲಿಯೇ ಮಲ್ಯ 15ರಿಂದ 20 ನಿಮಿಷಗಳ ಕಾಲ ಮಾತುಕತೆ ನಡೆಸಿರುವುದಾಗಿ ಆರೋಪಿಸಿದ್ದಾರೆ.
ಅರುಣ್ ಜೇಟ್ಲಿ ಈಗ ಸುಳ್ಳು ಹೇಳುತ್ತಿದ್ದಾರೆ. ಯಾಕೆಂದರೆ ಅಂದು ಮಲ್ಯ ಮತ್ತು ಜೇಟ್ಲಿ ಪ್ರತ್ಯೇಕವಾಗಿ ನಡೆಸುತ್ತಿದ್ದ ಮಾತುಕತೆಯನ್ನು ಕಾಂಗ್ರೆಸ್ ಮುಖಂಡ ಪಿಎಲ್ ಪುನಿಯಾ ಪ್ರತ್ಯಕ್ಷ ನೋಡಿದ್ದಾರೆ.
2016ರಲ್ಲಿ ಮಲ್ಯ ದೇಶ ಬಿಟ್ಟು ಪರಾರಿಯಾಗುವ ಮೊದಲು ವಿತ್ತ ಸಚಿವ ಜೇಟ್ಲಿ ಅವರು 20 ನಿಮಿಷಗಳ ಕಾಲ ಕುಳಿತುಕೊಂಡು ಮಾತುಕತೆ ನಡೆಸಿದ್ದಾರೆ. ಅದು ಸಿಸಿಟಿವಿಯಲ್ಲೂ ಸೆರೆಯಾಗಿದೆ. ಹೀಗಾಗಿ ಕ್ರಿಮಿನಲ್ ಮಲ್ಯ ಜೊತೆ ಜೇಟ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದು ಯಾಕೆ ಎಂಬುದನ್ನು ದೇಶದ ಜನತೆಗೆ ವಿವರಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮಾತುಕತೆ ಏನನ್ನು ಸೂಚಿಸುತ್ತದೆ ಎಂದರೆ ಇಬ್ಬರ ನಡುವೆ ಒಳಒಪ್ಪಂದ ನಡೆದಿದೆ. ಈ ನಿಟ್ಟಿನಲ್ಲಿ ವಿತ್ತ ಸಚಿವ ಜೇಟ್ಲಿ ಅವರು ರಾಜೀನಾಮೆ ನೀಡಬೇಕು ಮತ್ತು ಘಟನೆ ಬಗ್ಗೆ ತನಿಖೆ ನಡೆಸಬೇಕು ಎಂದು ರಾಹುಲ್ ಹೇಳಿದರು.