ಮೆಲ್ಬರ್ನ್: ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಬಳಿ ಗಡಿ ತಂಟೆ ಬಿಗಡಾಯಿಸಲು 2020ರ ಲಿಖೀತ ಒಪ್ಪಂದಗಳನ್ನು ಪಾಲಿಸಲು ಚೀನ ನಿರಾಕರಿಸಿದ್ದೇ ಕಾರಣ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.
ಶನಿವಾರ ಮೆಲ್ಬರ್ನ್ನಲ್ಲಿ ಮಾತನಾಡಿದ ಅವರು, ಬೀಜಿಂಗ್ ಹೊಂದಿರುವ ಧೋರ ಣೆಗಳು ಅಂತಾರಾಷ್ಟ್ರೀಯವಾಗಿ ಕಳವಳ ಮೂಡಿಸುವ ಸಂಗತಿಗಳಾಗಿವೆ ಎಂದಿದ್ದಾರೆ. ಇಂಡೋ-ಪೆಸಿಫಿಕ್ ವಲಯವನ್ನು ಚೀನ ಆತಂಕದ ಛಾಯೆಯಿಂದ ಮುಕ್ತಗೊಳಿಸಬೇಕು ಎಂಬ ಕ್ವಾಡ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ನಡುವೆಯೇ ಜೈಶಂಕರ್ ಈ ಮಾತುಗಳನ್ನಾಡಿದ್ದಾರೆ.
ಸಭೆಯಲ್ಲಿ ಭಾರತ ಮತ್ತು ಚೀನ ಗಡಿ ತಂಟೆ ಚರ್ಚೆಗೆ ಬಂದಿತ್ತೇ ಎಂಬ ಮಾಧ್ಯ ಮದವರ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್ “ಕ್ವಾಡ್ ಸಚಿವರ ಸಭೆಯಲ್ಲಿ ಚೀನ ತಂಟೆಯ ಬಗ್ಗೆ ಚರ್ಚೆಯಾಗಿದೆ. ನಮ್ಮ ನೆರೆಹೊರೆಯ ರಾಷ್ಟ್ರದ ಜತೆಗೆ ಇರುವ ಬಾಂಧವ್ಯದ ಬಗ್ಗೆ ಎಲ್ಲ ರಾಷ್ಟ್ರಗಳು ಪ್ರಸ್ತಾವ ಮಾಡಿವೆ’ ಎಂದರು. ಇದೇ ವೇಳೆ, ಕೊರೊನೋತ್ತರ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಪ್ರಯಾಣಿಕರ ಭೇಟಿಗೆ ಅವಕಾಶ ಕೊಟ್ಟದ್ದು ಸ್ವಾಗತಾರ್ಹ ಎಂದರು. ಇದರಿಂದಾಗಿ ಆಸೀಸ್‌ನ ಪ್ರಜೆಗಳಿಗೆ ಮಾತ್ರವಲ್ಲದೆ, ಭಾರತದ ವಿದ್ಯಾರ್ಥಿಗಳಿಗೆ ಕೂಡ ಅನುಕೂಲವಾಗಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚೀನದಿಂದ ಭಾರತಕ್ಕೆ ಸಮಸ್ಯೆ: ಚೀನ ದಿಂದಾಗಿ ಭಾರತ ಅತ್ಯಂತ ಸವಾಲಿನ ಪರಿಸ್ಥಿತಿ ಎದುರಿಸುತ್ತಿದೆ ಎಂದು ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ಅಮೆರಿಕ ನಡೆಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಬೈಡೆನ್ ಸರಕಾರ ಇದೇ ಮೊದಲ ಬಾರಿಗೆ ಪ್ರಾದೇಶಿಕ ವಾರು ಅಧ್ಯಯನ ನಡೆಸಿದ್ದು, ಅದರಲ್ಲಿ ಇಂಡೋ-ಪೆಸಿಫಿಕ್ ವ್ಯಾಪ್ತಿಯೂ ಸೇರಿದೆ. ಈ ಪ್ರದೇಶದಲ್ಲಿ ಭಾರತ ಒಂದು ಪ್ರಮುಖ ರಾಷ್ಟ್ರವಾಗಿ ಬೆಳೆಯಲು ಅಮೆರಿಕ ಯಾವತ್ತೂ ಬೆಂಬಲ ನೀಡಲಿದೆ. ಅದಕ್ಕಾಗಿ ಆ ದೇಶದ ಜತೆಗೆ ಅತ್ಯುತ್ತಮ ಬಾಂಧವ್ಯ ಹೊಂದಲು ನೆರವಾಗುತ್ತೇವೆ ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.