ಜಮ್ಮು : ಜಮ್ಮು ನಗರದಲ್ಲಿನ ಸಂಜ್ವಾನ್ ಸೇನಾ ಶಿಬಿರಕ್ಕೆ ಇಂದು ನಸುಕಿನ ವೇಳೆ ಉಗ್ರರ ಗುಂಪೊಂದು ನುಗ್ಗಿ ನಡೆಸಿದ ದಾಳಿಯಲ್ಲಿ ಇಬ್ಬರು ಜೂನಿಯರ್ ಕಮಿಷನ್‌ಡ್ ಆಫೀಸರ್ (ಜೆಸಿಓ) ಹುತಾತ್ಮರಾದರೆಂದರೆ ಸಂಸದೀಯ ವ್ಯವಹಾರಗಳ ಸಚಿವ ಅಬ್ದುಲ್ ರೆಹಮಾನ್ ವೀರಿ ಅವರು ಜಮ್ಮು ಕಾಶ್ಮೀರ ವಿಧಾನಸಭೆಗೆ ತಿಳಿಸಿದರು.
ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಗೆ ಸುಬೇದಾರ್ ಮಗನ್‌ಲಾಲ್ ಮತ್ತು ಸುಬೇದಾರ್ ಮೊಹಮ್ಮದ್ ಆಶ್ರಫ್ ಬಲಿಯಾದರು ಎಂದು ಸಚಿವರು ಹೇಳಿದರು. ಉಗ್ರರ ಗುಂಡಿಗೆ ಆರು ಮಂದಿ ಯೋಧರು ಗಾಯಗೊಂಡಿರುವುದಾಗಿ ಅವರು ತಿಳಿಸಿದರು.
ಸೇನಾ ಶಿಬಿರಕ್ಕೆ ನುಗ್ಗಿ ದಾಳಿ ಮಾಡಿದ ಉಗ್ರರು ಯಾವ ಸಂಘಟನೆಗೆ ಸೇರಿದವರೆಂದು ಸಚಿವರು ಹೇಳಿಲ್ಲವಾದರೂ ಈ ದಾಳಿಯ ಹಿಂದೆ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಇದೆ ಎಂದು ಶಂಕಿಸಲಾಗಿರುವುದಾಗಿ ಅವರು ತಿಳಿಸಿದರು.
ಡಿಜಿಪಿ ಎಸ್ ಪಿ ವೈದ್ ಅವರು ಹೇಳಿರುವ ಪ್ರಕಾರ ಉಗ್ರರು ಸಂಜ್ವಾನ್ ಸೇನಾ ಶಿಬಿರವನ್ನು ಹಿಂಭಾಗದಿಂದ ಪ್ರವೇಶಿಸಿದ್ದಾರೆ. ಆ ಭಾಗದಲ್ಲಿ ಯೋಧರ ಕುಟುಂಬಗಳು ನೆಲೆಸಿರುವ ಕ್ವಾರ್ಟರ್ಸ್‌ಗಳಿವೆ. ಉಗ್ರರು ದಾಳಿಗೆ ಮುನ್ನ ಪರಸ್ಪರ ಪ್ರತ್ಯೇಕಗೊಂಡು ಶಿಬಿರದೊಳಗೆ ನುಗ್ಗಿ ಬಂದಿದ್ದಾರೆ.
ಐಜಿಪಿ ಎಸ್ ಡಿ ಸಿಂಗ್ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, “ಉಗ್ರರು ನಸುಕಿನ 4.55ರ ಹೊತ್ತಿಗೆ ಶಿಬಿರವನ್ನು ಹೊಕ್ಕಿದ್ದಾರೆ. ಆ ಸಂದರ್ಭದಲ್ಲಿ ಶಂಕಾಸ್ಪದ ಚಲನವಲನಗಳನ್ನು ಸೆಂಟ್ರಿ ಗುರುತಿಸಿದ್ದಾರೆ. ಆಗಲೇ ಅವರ ಬಂಕರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ನಿರ್ದಿಷ್ಟ ಸಂಖ್ಯೆ ಗೊತ್ತಾಗಿಲ್ಲ.
ಭದ್ರತಾ ಪಡೆಗಳು ಈಗ ಸಂಜ್ವಾನ್ ಸೇನಾ ಶಿಬಿರದ ಒಟ್ಟು ಪ್ರದೇಶವನ್ನು ಎಲ್ಲೆಡೆಯಿಂದ ಸುತ್ತುವರಿದಿದ್ದಾರೆ. ಈ ಶಿಬಿರವ ಜಮ್ಮು ಕಾಶ್ಮೀರ 36ನೇ ಬ್ರಿಗೇಡ್‌ನ ಲೈಟ್ ಇನ್‌ಫ್ಯಾಂಟ್ರಿಗೆ ಸೇರಿದುದಾಗಿದೆ.
ಸೇನಾ ಶಿಬಿರ ವ್ಯಾಪ್ತಿ ಪ್ರದೇಶದ ಶಾಲೆಗಳನ್ನು ಮುಚ್ಚಲಾಗಿದೆ.