ಹೊಸದಿಲ್ಲಿ/ಶ್ರೀನಗರ: ಪಾಕ್ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ನಂಟು ಹೊಂದಿರುವ ಮೊಬೈಲ್ ಆ್ಯಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಸಕ್ರಿಯವಾಗಿರುವ ಅಂಶ ಈಗ ಬೆಳಕಿಗೆ ಬಂದಿದೆ.
ಇಸ್ಲಾಮಿಕ್ ಬೋಧನೆ ಮಾಡುವ “ಅಚಿ ಬಟೀನ್’ ಎಂಬ ಹೆಸರಿನ ಆ್ಯಪ್ ಇದಾಗಿದೆ. ಇದು ಬಹಿರಂಗವಾಗಿ ಜೈಶ್ ಜತೆ ನಂಟು ಹೊಂದಿರುವುದನ್ನು ಹೇಳಿಕೊಂಡಿಲ್ಲ. ಆದರೆ ಆ್ಯಪ್‌ನ ಡೆವಲಪರ್‌ನ ಪೇಜ್‌ನಲ್ಲಿ ಜೈಶ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಮಾಹಿತಿಗಳು ಇವೆ.
ಜತೆಗೆ ಅಜರ್ ಮತ್ತು ಆತನ ಸಹಚರರ ಕೃತಿಗಳು, ಸಾಹಿತ್ಯ ಮತ್ತು ಆಡಿಯೋ ಸಂದೇಶಗಳಿರುವ ಬಾಹ್ಯ ವೆಬ್ ಪೇಜ್‌ಗಳ ಲಿಂಕ್‌ಗಳನ್ನೂ ಈ ಆ್ಯಪ್ ಒಳಗೊಂಡಿದೆ. 2020ರ ಡಿ.4ರಿಂದ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಿದ್ದು, ಈವರೆಗೆ 5 ಸಾವಿರ ಡೌನ್‌ಲೋಡ್‌ಗಳನ್ನು ಕಂಡಿದೆ ಎಂದು “ಇಂಡಿಯಾ ಟುಡೇ’ ವರದಿ ಮಾಡಿದೆ.
ಇದನ್ನೂ ಓದಿ:ಕೇರಳ: ಮಳೆಯಿಂದ ನಾಲ್ವರು ಸಾವು
ಎನ್‌ಐಎ ದಾಳಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಹತ್ಯೆಗೆ ಸಂಬಂಧಿಸಿದ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಎನ್‌ಐಎ, ಮಂಗಳವಾರ ಕೇಂದ್ರಾಡಳಿತ ಪ್ರದೇಶದ 16 ಪ್ರದೇಶಗಳಲ್ಲಿ ದಾಳಿ ನಡೆಸಿದೆ. ಲಷ್ಕರ್, ಜೈಶ್, ಹಿಜ್ಬುಲ್ ಮುಜಾಹಿದೀನ್, ಅಲ್ ಬದ್ರ್ ಮತ್ತು ಇತರೆ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವವರನ್ನೇ ಗುರಿಯಾಗಿಸಿಕೊಂಡು ಶೋಧ ಕಾರ್ಯ ನಡೆಸಲಾಗಿದೆ.