Advertisement

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

02:08 PM Dec 23, 2024 | Team Udayavani |

ಜೈಪುರ: ಕಳೆದೊಂದು ದಶಕದಿಂದ ಹಲವು ಯುವಕರನ್ನು ವಿವಾಹವಾಗಿ ಕೋಟಿಗೂ ಹೆಚ್ಚು ಹಣ ಪೀಕಿದ್ದ ಖತರ್ನಾಕ್‌ ಯುವತಿಯನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗಿ ಬಳಿಕ ವರನ ಮೇಲೆ ಕೇಸು ಹಾಕಿ ನಂತರ ಸೆಟಲ್‌ಮೆಂಟ್ ಹೆಸರಿನಲ್ಲಿ ಹಣ ಪೀಕುತ್ತಿದ್ದಳು. ಹೀಗೆ ಸುಮಾರು 1.25 ಕೋಟಿ ರೂ ಹಣ ವಸೂಲಿ ಮಾಡಿದ್ದಳು.

Advertisement

ಉತ್ತರಾಖಂಡ್‌ ನ ಸೀಮಾ ಅಲಿಯಾಸ್‌ ನಿಕ್ಕಿ ಈ ಬಂಧಿತ ಕಿಲಾಡಿ ಹೆಣ್ಣು. ಮೊದಲು 2013ರಲ್ಲಿ ಆಗ್ರಾದ ಉದ್ಯಮಿಯೊಬ್ಬರನ್ನು ಮದುವೆಯಾದ ಈಕೆ ಕೆಲ ಸಮಯದ ನಂತರ ಆ ವ್ಯಕ್ತಿಯ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಕೊನೆಯ ರಾಜಿ ಪಂಚಾಯತಿಯಾಗಿ 75 ಲಕ್ಷ ರೂ ವಸೂಲಿ ಮಾಡಿದ್ದಳು.

2017 ರಲ್ಲಿ ಇದೇ ಸೀಮಾ ಗುರುಗ್ರಾಮ್‌ನ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಮದುವೆಯಾದಳು. ಅವನಿಂದ ಬೇರೆಯಾದ ನಂತರ ಆ ವ್ಯಕ್ತಿಯಿಂದ 10 ಲಕ್ಷ ರೂ ಸೆಟಲ್‌ಮೆಂಟ್ ರೂಪದಲ್ಲಿ ತೆಗೆದುಕೊಂಡಿದ್ದಳು.

2023 ರಲ್ಲಿ ಜೈಪುರ ಮೂಲದ ಉದ್ಯಮಿಯನ್ನು ಸೀಮಾ ವಿವಾಹವಾಗಿದ್ದಳು. ಮದುವೆಯಾಗಿ ಕೆಲವೇ ಸಮಯದಲ್ಲಿ 36 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಅವರ ಮನೆಯಿಂದ ಪರಾರಿಯಾಗಿದ್ದರು. ಕುಟುಂಬದವರು ಪ್ರಕರಣ ದಾಖಲಿಸಿದ ನಂತರ ಜೈಪುರ ಪೊಲೀಸರು ಸೀಮಾಳನ್ನು ಬಂಧಿಸಿದ್ದಾರೆ.

Advertisement

ಸೀಮಾ ತನ್ನ ಬಲಿಪಶುಗಳನ್ನು ಮ್ಯಾಟ್ರಿಮೋನಿಯಲ್ ಸೈಟ್‌ ಗಳಲ್ಲಿ ಹುಡುಕುತ್ತಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಸಾಮಾನ್ಯವಾಗಿ ವಿಚ್ಛೇದನ ಪಡೆದ ಅಥವಾ ತಮ್ಮ ಹೆಂಡತಿಯನ್ನು ಕಳೆದುಕೊಂಡಿರುವ ಪುರುಷರಿಗಾಗಿ ಸೀಮಾ ಬಲೆ ಬೀಸುತ್ತಿದ್ದಳು. ಬೇರೆ ಬೇರೆ ರಾಜ್ಯಗಳಲ್ಲಿ ಮದುವೆಯಾಗಿ ವಿವಿಧ ಪ್ರಕರಣಗಳಲ್ಲಿ ಒಟ್ಟು 1.25 ಕೋಟಿ ರೂ ವಸೂಲಿ ಮಾಡಿದ್ದಾಳೆ.

ಮದುವೆಯ ನಂತರ, ಕುಟುಂಬದೊಂದಿಗೆ ವಿಶ್ವಾಸವನ್ನು ಬೆಳೆಸಲು ಮೂರು ನಾಲ್ಕು ತಿಂಗಳುಗಳನ್ನು ಅವರೊಂದಿಗೆ ಕಳೆಯುತ್ತಿದ್ದಳು. ಬಳಿಕ ಅವರ ಆಸ್ತಿಯೊಂದಿಗೆ ಪರಾರಿಯಾಗುತ್ತಿದ್ದಳು.

2023 ಜುಲೈ 29ರಂದು ಜೈಪುರ ಆಭರಣ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರು ತಮ್ಮ ಮೊದಲ ಪತ್ನಿಯ ನಿಧನದ ನಂತರ, ಅವರು ಮ್ಯಾಟ್ರಿಮೋನಿಯಲ್ ಅಪ್ಲಿಕೇಶನ್ ಮೂಲಕ ಸೀಮಾ ಪರಿಚಯ ಮಾಡಿಕೊಂಡಿದ್ದರು. ಡೆಹ್ರಾಡೂನ್‌ನಲ್ಲಿ ಆಕೆಯನ್ನು ಭೇಟಿ ಮಾಡಿ, ಕಳೆದ ವರ್ಷ ಫೆಬ್ರವರಿಯಲ್ಲಿ ಆಕೆಯನ್ನು ಮದುವೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next