ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿ ಅಕ್ಕಿಪೇಟದಲ್ಲಿರುವ 1008 ಪಾಶ್ಚನಾಥ ದಿಗಂಬರ ಜೈನ್ ಮಂದಿರದಲ್ಲಿ ಸೋಮವಾರ ನೂತನ ರಥದೊಂದಿಗೆ ಪದ್ಮಾವತಿ ಅಮ್ಮನವರ ಪ್ರಥಮ ವರ್ಷದ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಜೈನ ಪರಪಂರೆ ಆಚರಣೆಯಂತೆ ಪ್ರತಿ ವರ್ಷ ಮೂಲಾ ನಕ್ಷತ್ರದಂದು ಶ್ರೀ ಪದ್ಮಾವತಿ ದೇವಿಯ ಉತ್ಸವ ನಡೆಯುತ್ತಿದ್ದು ಈ ವರ್ಷ ವಿಶೇಷವಾಗಿ ಅಮ್ಮನವರ ರಥೋತ್ಸವ ನಡೆಯಿತು. ಮಾ.6ರಂದು ರಥದ ಶುದ್ಧೀಕರಣ ಹೋಮ ನೆರವೇರಿಸಲಾಗಿದ್ದು, ಮಾ.20ರಂದು ಸೋಮವಾರ ಸಂಜೆ ರಥೋತ್ಸವ ನೆರವೇರಿಸಲಾಯಿತು.
ಬೆಳಿಗ್ಗೆ 8:30 ಪಾರ್ಶ್ವನಾಥ ತೀರ್ಥಂಕರರಿಗೆ, ಶ್ರೀ ಧರಣೇಂದ್ರ ಯಕ್ಷ ಮತ್ತು ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ, 10ಗಂಟೆಗೆ ಕಲಿಕುಂಡಲ ಆರಾಧನೆ, ಪದ್ಮಾವತಿ ದೇವಿಗೆ ಷೋಡಷೋಪಚಾರ ಪೂಜೆ, ಇಂದ್ರ ಇಂದ್ರಾಣಿಯರಿಂದ ಉಡಿ ತುಂಬುವ ಕಾರ್ಯಕ್ರಮ, ಸಂಜೆ 5:00ಗಂಟೆಗೆ ಸುಮಂಗಲೆಯರಿಂದ ಶ್ರೀ ಪದ್ಮಾವತಿ ಅಮ್ಮನವರಿಗೆ ಕುಂಕುಮಾರ್ಚನೆ, ಸಹಸ್ರ ನಾಮಾವಳಿ ನಡೆಸಲಾಯಿತು.
ಸಂಜೆ 7:30ಗಂಟೆಗೆ ಆನೆ ಅಂಬಾರಿ, ಕುದುರೆ, ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ಆಸಾರ ಮೊಹಲ್ಲಾದಲ್ಲಿರುವ ಅನಂತನಾಥ ತೀರ್ಥಂಕರ ಮಂದಿರದವರೆಗೆ ತೆರಳಿ ಅಲ್ಲಿ ಮಹಾಮಂಗಳಾರತಿ ಮುಗಿಸಿಕೊಂಡಿ ಮರಳಿ ಅಕ್ಕಿಪೇಟ ಪಾರ್ಶ್ವನಾಥ ತೀರ್ಥಂಕರ ಮಂದಿರಕ್ಕೆ ಆಗಮಿಸಿ ಮುಕ್ತಾಯಗೊಂಡಿತು.
ವರೂರ ನವಗ್ರ ಕ್ಷೇತ್ರದ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಆತ್ಮಸಾಗರ ಮುನೀಜಿ, ಪದ್ಮಲತಾ ನಿರಂಜನ, ನಿರಂಜನಕುಮಾರ, ವಿಮಲ ತಾಳಿಕೋಟಿ, ಉದಯ ದಢೂತಿ, ತವನಪ್ಪ ಶಿರಗುಪ್ಪಿ, ರಾಜೇಂದ್ರ ದಿನಕರ, ಮಹಾವೀರ ಸೂಜಿ ಇದ್ದರು.