ಕಾಗವಾಡ: ಜೈನ ಸಮಾಜದ ತೀರ್ಥಕ್ಷೇತ್ರ, ಜಾರ್ಖಂಡ್ ರಾಜ್ಯದ ಸಮ್ಮೇದ ಶಿಖರ್ಜಿ ಮಧುಬನ ಕ್ಷೇತ್ರದ ದರ್ಶನಕ್ಕಾಗಿ ತೆರಳಿದ್ದ ಕಾಗವಾಡ, ಅಥಣಿ, ಚಿಕ್ಕೋಡಿ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ಮೊದಲಾದ ಗ್ರಾಮಗಳ 70 ಶ್ರಾವಕ-ಶ್ರಾವಿಕೆಯರು ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ 40 ದಿನಗಳಿಂದ ಸಮ್ಮೇದ ಶಿಖರ್ಜಿಯಲ್ಲಿ ಸಿಲುಕಿದ್ದು, ಮನೆಗೆ ಮರಳಿ ಬರಲು ಹಂಬಲಿಸುತ್ತಿದ್ದಾರೆ.
ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದ ಜೈನ ಸಮಾಜದ ಆರ್ಚಕರಾದ ಶರದ್ ಉಪಾಧ್ಯೆ, ಖಾಸಗಿ ಟ್ರಾವಲರ್ ಆಯೋಜಿಸಿದ್ದ 22 ದಿನಗಳ ಜೈನ ಸಮಾಜದ ತಿರ್ಥಕ್ಷೇತ್ರಗಳ ದರ್ಶನದ ಪ್ರವಾಸಕ್ಕೆಂದು ಮಾ. 11ರಂದು ತೆರಳಿದ್ದರು. ಖಾಸಗಿ ಸಂಸ್ಥೆ ಆಯೋಜಿಸಿದ್ದ ತೀರ್ಥಕ್ಷೇತ್ರ ದರ್ಶನ ಪ್ರವಾಸಕ್ಕೆಂದು ರಸ್ತೆ ಮಾರ್ಗವಾಗಿ 52 ಜನ ಮತ್ತು ರೈಲು ಮೂಲಕ 18 ಜನರಂತೆ 70 ಶ್ರಾವಕರು ಪ್ರಯಾಣ ಬೆಳೆಸಿದ್ದು, ಇದರಲ್ಲಿ ಅಥಣಿ ತಾಲೂಕಿನ ಸವದಿ ಗ್ರಾಮದ 34, ನಂದಗಾಂವ ಗ್ರಾಮದ 12, ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ 8, ಮೋಳವಾಡ ಗ್ರಾಮದ 4, ಇಂಗಳಿ ಗ್ರಾಮದಿಂದ 6 ಜನರು, ಅಡಿಗೆಭಟ್ಟರು 4, ಬಸ್ ಚಾಲಕ ಮತ್ತು ನಿರ್ವಾಹಕ ಸೇರಿದ್ದಾರೆ.
ಉಗಾರ ಖುರ್ದ ಪಟ್ಟಣದ ಜೈನ ಸಮಾಜದ ಆರ್ಚಕರಾದ ಶರದ್ ಉಪಾಧ್ಯೆ ಅವರಲ್ಲಿ ಒಬ್ಬರು. ಕಾಗವಾಡ ತಾಲೂಕಿನ ಉಗಾರದಿಂದ ಪ್ರಯಾಣ ಬೆಳೆಸಿ ಮಹಾರಾಷ್ಟ್ರದ ಕುಂತಲಗಿರಿ, ಕಚನೇರ, ಜಿಂತೂರ, ಕಾರಂಜಾ, ಮುಕ್ತಗಿರಿ, ರಾಮಟೇಕ್, ಮಧ್ಯಪ್ರದೇಶದ ಜಬಲಪೂರ, ಭೆಂಡಾ ಘಾಟ, ಉತ್ತರಪ್ರದೇಶದ ಅಲಹಾಬಾದ್ ಹೀಗೆ ತೀರ್ಥಕ್ಷೇತ್ರಗಳ ದರ್ಶನ ಪಡೆಯುತ್ತಾ ಮಾ. 18ರಂದು ಶ್ರೀ ಸಮ್ಮೇದ ಶಿಖರ್ಜಿ ತಲುಪಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಮಾ. 22 ರಿಂದ ಲಾಕ್‌ಡೌನ್ ನಿರ್ಣಯ ಕೈಗೊಂಡಿದ್ದರಿಂದ ಈ ಎಲ್ಲ ಭಕ್ತಾದಿಗಳು ಮಧುಬನ ತೀರ್ಥಕ್ಷೇತ್ರದಲ್ಲಿ ಉಳಿದುಕೊಂಡಿದ್ದಾರೆ. ಅಲ್ಲಿಯ ಜಿಲ್ಲಾಡಳಿತ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಆದರೂ ಜನ ತಮ್ಮ ಮನೆಗೆ ತರಳಲು ಹಂಬಲಿಸುತ್ತಿದ್ದಾರೆ ಎಂದು ಆರ್ಚಕ ಶರದ್ ಉಪಾಧ್ಯೆ ತಿಳಿಸಿದರು.
ಸಚಿವರು, ಶಾಸಕರಿಂದ ಪ್ರಯತ್ನ: ಜನರನ್ನು ಮರಳಿ ಕರೆತರಲು ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಶ್ರೀಮಂತ ಪಾಟೀಲ, ಸಚಿವೆ ಶಶಿಕಲಾ ಜೊಲ್ಲೆ, ಮಹಾರಾಷ್ಟ್ರ ಜವಳಿ ಖಾತೆ ಸಚಿವ ರಾಜೇಂದ್ರ ಯಡ್ರಾಂವಕರ, ದಕ್ಷಿಣ ಭಾರತ ಜೈನ್ ಸಭೆ ಅಧ್ಯಕ್ಷ ರಾವಸಾಹೇಬ ಪಾಟೀಲ ಇತರರು ಪ್ರಯತ್ನಿಸುತ್ತಿದ್ದಾರೆ.