ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼಜೈಲರ್ʼ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸಿನಿಮಾ ತಂಡ ಕೋರ್ಟ್ ನಿಂದ ಬಂದ ಆದೇಶವೊಂದಕ್ಕೆ ತಲೆಬಾಗಿದೆ.
ಏನಿದು ವಿವಾದ?: ʼಜೈಲರ್ ʼಸಿನಿಮಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡದ ಜೆರ್ಸಿಯನ್ನು ಹಾಕಿದ ನೆಗೆಟಿವ್ ಪಾತ್ರವೊಂದಿದೆ. ಈ ಪಾತ್ರದಲ್ಲಿರುವ ವ್ಯಕ್ತಿ ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ದೃಶ್ಯವೊಂದಿದೆ. ಇದು ತಂಡದ ಬ್ರ್ಯಾಂಡ್ ಗೆ ಧಕ್ಕೆ ಆಗುತ್ತದೆ. ತಮ್ಮ ಅನುಮತಿಯಿಲ್ಲದೆ ಇದನ್ನು (ಜೆರ್ಸಿ ದೃಶ್ಯ) ಬಳಸಿಕೊಳ್ಳಲಾಗಿದೆ ಎಂದು ಆರ್ ಸಿಬಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಎರಡೂ ಕಡೆಯ ವಾದವನ್ನು ಕೇಳಿದ ಬಳಿಕ, ಸೆಪ್ಟೆಂಬರ್ 1 ರೊಳಗೆ ಸಿನಿಮಾದಲ್ಲಿ ಬಳಸಲಾಗಿರುವ ಆರ್ ಸಿಬಿ ಜೆರ್ಸಿಯ ದೃಶ್ಯವನ್ನು ತೆಗೆದುಹಾಕಬೇಕು ಅಥವಾ ಎಡಿಟ್ ಮಾಡಬೇಕು. ಟಿವಿ,ಓಟಿಟಿಯಲ್ಲಿ ಸಿನಿಮಾ ಪ್ರಸಾರವಾಗುವ ಮುನ್ನ ಇದನ್ನು ಮಾಡಬೇಕೆಂದು ಆದೇಶಿಸಿ, ಸಿನಿಮಾ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಗೆ ಕೋರ್ಟ್ ಹೇಳಿದೆ.
ʼಜೈಲರ್ ʼನಿರ್ಮಾಪಕರು ಕೋರ್ಟ್ ಅದೇಶಕ್ಕೆ ತಲೆಬಾಗಿದ್ದು, ಕೋರ್ಟ್ ಹೇಳಿದಂತೆ ಸಿನಿಮಾದಲ್ಲಿನ ಆರ್ ಸಿಬಿ ಜೆರ್ಸಿಯ ದೃಶ್ಯವನ್ನು ತೆಗೆದುಹಾಕುವುದಾಗಿ ಹೇಳಿದೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ʼಜೈಲರ್ʼ ರಜಿನಿಕಾಂತ್ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನಾಯಕನ್, ರಮ್ಯಾ ಕೃಷ್ಣನ್, ವಸಂತ ರವಿ, ಸುನೀಲ್, ತಮನ್ನಾ ಮತ್ತು ಯೋಗಿ ಬಾಬು ಮುಂತಾದವರು ನಟಿಸಿದ್ದಾರೆ. ಮೋಹನ್ ಲಾಲ್, ಶಿವ ರಾಜಕುಮಾರ್ ಮತ್ತು ಜಾಕಿ ಶ್ರಾಫ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.