ಬೆಂಗಳೂರು: ಬಹುಕೋಟಿ ವಂಚಕ, ಜೈಲು ಪಾಲಾಗಿರುವ ಕಾನ್ಮನ್ ಸುಕೇಶ್ ಚಂದ್ರ ಶೇಖರ್ ಗೆ ಸೇರಿದ ಐಷಾರಾಮಿ ಕೋಟ್ಯಂತರ ರೂ. ಮೌಲ್ಯದ ಕಾರುಗಳನ್ನು ಹರಾಜು ಹಾಕಾಲಾಗುತ್ತಿದೆ.
ಸುಕೇಶ್ ಹಲವು ಸಂಸ್ಥೆಗಳಿಗೆ ನೀಡಬೇಕಾದ ಬಾಕಿಯನ್ನು ವಸೂಲಿ ಮಾಡುವ ಪ್ರಯತ್ನದ ಭಾಗವಾಗಿ ಮುಂದಿನ ವಾರ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯು ದುಬಾರಿ ಮತ್ತು ಐಷಾರಾಮಿ ವಾಹನಗಳನ್ನು ಹರಾಜು ಮಾಡಲಿದೆ ಎಂದು ಮೂಲಗಳು ತಿಳಿಸಿವೆ.ಐಟಿ ಇಲಾಖೆ ಮೂಲಗಳ ಪ್ರಕಾರ, ನವೆಂಬರ್ 28 ರಂದು 11 ಐಷಾರಾಮಿ ಕಾರುಗಳು ಮತ್ತು ಬೈಕ್‌ಗಳು ಇ-ಹರಾಜಿಗೆ ಬರಲಿವೆ.
ಬಿಎಂ ಡಬ್ಲ್ಯೂ ಎಂ5, ಟೊಯೋಟಾ ಪ್ರಾಡೊ, ರೇಂಜ್ ರೋವರ್, ಲ್ಯಾಮ್ಬೋರ್ಗಿನಿ , ಜಾಗ್ವಾರ್ ಎಕ್ಸ್ ಕೆಆರ್ ಕೂಪೆ, ರೋಲ್ಸ್ ರಾಯ್ಸ್, ಬೆಂಟ್ಲಿ, ಇನ್ನೋವಾ ಕ್ರಿಸ್ಟಾ, ಟೊಯೋಟಾ ಫಾರ್ಚೂನರ್, ನಿಸ್ಸಾನ್ ಟೀನಾ ಮತ್ತು ಪೋರ್ಷೆ ಕಾರುಗಳು ಹರಾಜಾಗಲಿವೆ.
ಈ 11 ಕಾರುಗಳ ಹೊರತಾಗಿ, ಐಟಿ ಇಲಾಖೆಯು ಸುಕೇಶ್ ಗೆ ಸೇರಿರುವ ಸ್ಪೋರ್ಟ್ಸ್ ಕ್ರೂಸರ್ ಬೈಕ್ – ಡುಕಾಟಿ ಡಯಾವೆಲ್ ಅನ್ನು ಸಹ ಹರಾಜು ಮಾಡಲಿದೆ. ಇಲಾಖೆ ನೀಡಿರುವ ನೋಟಿಸ್ ಉಲ್ಲೇಖಿಸಿ ಮೂಲಗಳು ಈ ವಾಹನಗಳ ಬೆಲೆ 2.03 ಲಕ್ಷದಿಂದ 1.74 ಕೋಟಿ ರೂ. ವರೆಗೆ ಇದೆ ಎಂದು ಹೇಳಿದೆ.
ಕೇರಳ, ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಇಲಾಖೆ ವಶಪಡಿಸಿಕೊಂಡಿರುವ ಈ ವಾಹನಗಳನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಲಾಗುತ್ತದೆ. ಪ್ರಸ್ತುತ, ಇಲಾಖೆಯು ಉತ್ತಮ ಸ್ಥಿತಿಯಲ್ಲಿ ಎಂದು ಹೇಳಿರುವ ಈ ವಾಹನಗಳನ್ನು ಶುಕ್ರವಾರದವರೆಗೆ ತಪಾಸಣೆಗಾಗಿ ಕೇಂದ್ರ ಕಂದಾಯ ಕಟ್ಟಡದಲ್ಲಿ ಇರಿಸಲಾಗಿದೆ ಎಂದು ತಿಳಿಸಿವೆ.
ನವೆಂಬರ್ 10 ರ ವೇಳೆಗೆ ಚಂದ್ರಶೇಖರ್ ವಿವಿಧ ಸರಕಾರಿ ಸಂಸ್ಥೆಗಳಿಗೆ 308.48 ಕೋಟಿ ರೂ. ನೀಡಬೇಕಾಗಿದೆ. ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿರುವ ಚಂದ್ರಶೇಖರ್ ಫಾರ್ಮಾ ಮೇಜರ್ ರಾನ್‌ಬಾಕ್ಸಿಯ ಮಾಜಿ ಮಾಲಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಂದ ಸುಮಾರು 200 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿರುವ ಆರೋಪವಿದೆ.