ಚಂದಾಪುರ: ಪೊಲೀಸರ ಸೋಗಿನಲ್ಲಿ ದಂಪತಿ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಆರೋಪಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದಿದ್ದು, ಆರೋಪಿ ಈ ಹಿಂದೆ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರ ವಶದಲ್ಲಿ ಇದ್ದಾಗ ನೀಡಿದ ಹಿಂಸೆ ಆತನ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಮಡಿವಾಳದ ತಾವರೆಕೆರೆ ನಿವಾಸಿ ಗಣೇಶ್ ಮೃತ ಕೈದಿ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಡಿ.12ರಂದು ರಾತ್ರಿ 9.30ರ ಸುಮಾರಿಗೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಸಂಜೀವ್ ಕುಮಾರ್ ಬೊರೊ ಎಂಬ ದಂಪತಿ ಮನೆಗೆ ನುಗ್ಗಿದ ಆರೋಪಿ, ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಮ್ಮಿಂದ ಅಕ್ಕ-ಪಕ್ಕದ ಮನೆಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರು ಬಂದಿದೆ.
ಅದಕ್ಕೆ ದಂಪತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಬೆದರಿಸಿ ದಂಪತಿಯಿಂದ 2.5 ಲಕ್ಷ ರೂ. ನಗದು ಸುಲಿಗೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಸಂಜೀವ್ ಕುಮಾರ್ ಬೊರೊ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೆಲ ದಿನಗಳ ಹಿಂದೆ ಆರೋಪಿ ಗಣೇಶ್ ಸೇರಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗಣೇಶ್‌ಗೆ ಠಾಣೆಯಲ್ಲಿ ಹಿಂಸೆ ನೀಡಲಾಗಿದೆ. ಮರ್ಮಾಂಗ ಮತ್ತು ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.
ಲಿವರ್ ಸಮಸ್ಯೆ: ಬಳಿಕ ಆತನನ್ನು ಕೋರ್ಟ್‌ಗೆ ಹಾಜರು ಪಡಿಸಿ, ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಿದ್ದರು. ಆದರೆ, ಕೆಲ ದಿನಗಳಿಂದ ಗಣೇಶ್‌ಗೆ ಊಟ ಸೇರುತ್ತಿರಲಿಲ್ಲ. ಬಳಿಕ ಜೈಲಿನ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಈ ವೇಳೆ ಲಿವರ್ ಸಮಸ್ಯೆ ಕಂಡು ಬಂದಿದ್ದು, ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಣೇಶ್ ಪೋಷಕರು, ಸ್ನೇಹಿತರಿಂದ ಆರೋಪ: ಆದರೆ, ಗಣೇಶ್ ಪೋಷಕರು ಹಾಗೂ ಸ್ನೇಹಿತರು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರ ಹಲ್ಲೆ, ದೌರ್ಜನ್ಯದಿಂದ ಗಂಭೀರವಾಗಿ ಗಾಯಗೊಂಡಿದ್ದ ಗಣೇಶ್, ಜೈಲಿಗೆ ಹೋದ ಬಳಿಕ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ ಎಂದು ಆರೋಪಿಸುತ್ತಿದ್ದಾರೆ. ವಿಚಾರಣೆ ನೆಪದಲ್ಲಿ ಗಣೇಶ್‌ನನ್ನು ಐದಾರು ದಿನಗಳ ಕಾಲ ಠಾಣೆಯಲ್ಲೇ ಇರಿಸಿಕೊಂಡಿದ್ದರು. ಈ ವೇಳೆ ಗಣೇಶ್‌ನ ಮರ್ಮಾಂಗ ಮತ್ತು ಗುದದ್ವಾರಕ್ಕೆ ಖಾರದಪುಡಿ ಹಾಗೂ ಮೆಣಸಿನಕಾಯಿ ಪುಡಿ ಹಾಕಿ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿದ್ದರು. ಗಣೇಶ್ ತನಗೆ ಕರೆ ಮಾಡುತ್ತಿದ್ದ ಎಂಬ ಕಾರಣಕ್ಕೆ ನನ್ನನ್ನು ಠಾಣೆಗೆ ಕರೆಸಿಕೊಂಡು ಐದಾರು ದಿನಗಳ ಕಾಲ ಠಾಣೆಯಲ್ಲೇ ಇರಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ತನ್ನ ಬಳಿ ಆರುವರೆ ಲಕ್ಷ ರೂ. ನಗದು, ಚಿನ್ನ ಪಡೆದುಕೊಂಡಿದ್ದಾರೆ. ನನ್ನ ತಂದೆ ಬಳಿಯೂ ಹಣ ಪಡೆದುಕೊಂಡಿದ್ದಾರೆ ಎಂದು ಗಣೇಶ್ ಸ್ನೇಹಿತ ವಿನೋದ್ ಎಂಬವರು ಆರೋಪಿಸಿದ್ದಾರೆ.
ಮನೆಗೆ ನುಗ್ಗಿ ರಾಬರಿ ಮಾಡಿದ ಪ್ರಕರಣದಲ್ಲಿ ಗಣೇಶ್‌ನನ್ನು ಬಂಧಿಸಿ, ವಿಚಾರಣೆ ನಡೆಸಿದ ಬಳಿಕ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಲಾ ಗಿತ್ತು. ಆ ನಂತರ ಕೆಲ ದಿನಗಳ ಬಳಿಕ ಗಣೇಶ್ ಜೈಲಿನಲ್ಲಿ ಮೃತಪಟ್ಟಿದ್ದಾನೆ. ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆ ಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
-ಸಿ.ಕೆ.ಬಾಬಾ, ಆಗ್ನೇಯ ವಿಭಾಗದ ಡಿಸಿಪಿ