Advertisement

ಅಕ್ರಮ ನಿರ್ಮಾಣಕ್ಕೆ ನೆರವಾದ್ರೆ ಜೈಲೇ ಗತಿ

12:02 PM Nov 29, 2018 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಕಾರಣರಾಗುವ ಅಧಿಕಾರಿಗಳಿಗೆ ತಕ್ಕ “ಶಾಸ್ತಿ’ ಕಾದಿದೆ. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಕ್ರಮ ಮತ್ತು ಅನಧಿಕೃತ ಕಟ್ಟಡಗಳಿಗೆ ಕಡಿವಾಣ ಹಾಕಲು ವಿಫ‌ರಾಗುವ ಇಂಜಿನಿಯರ್‌ಗಳಿಗೆ ಕರ್ನಾಟಕ ಪೌರ ನಿಗಮ ಕಾಯ್ದೆ-1976ರ ಅನ್ವಯ ಶಿಕ್ಷೆಯ ಸ್ವರೂಪ ಹಾಗೂ ದಂಡದ ಪ್ರಮಾಣ ನಿಗದಿಪಡಿಸಿ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.

Advertisement

ಅಕ್ರಮ ಕಟ್ಟಡಗಳ ನಿರ್ಮಾಣದಲ್ಲಿ ಭಾಗಿಯಾಗುವ ಅಧಿಕಾರಿಗಳಿಗೆ ಶಿಕ್ಷೆ ಪ್ರಮಾಣ ನಿಗದಿಪಡಿಸುವಂತೆ ಕೋರಿ ವಕೀಲ ಎಸ್‌.ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಸುಜಾತಾ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ರಾಜ್ಯ ಸರ್ಕಾರ ಬುಧವಾರ ಕರಡು ಅಧಿಸೂಚನೆ ಸಲ್ಲಿಸಿತು.

ಅಕ್ರಮ ಹಾಗೂ ಕಾನೂನುಬಾಹಿರ ಕಟ್ಟಡಗಳ ನಿರ್ಮಾಣಕ್ಕೆ ಕಾರಣರಾಗುವ, ಅಂತಹ ಕಟ್ಟಡಗಳಿಗೆ ಕಡಿವಾಣ ಹಾಕಲು ವಿಫ‌ಲರಾಗುವ, ಆದೇಶ ಜಾರಿಗೊಳಿಸುವಲ್ಲಿ ಲೋಪ ಎಸಗುವ, ಮಂಜೂರಾತಿ ನೀಡಲು ಅಥವಾ ನಿರಾಕರಿಸಲು ಕಾನೂನಿನ ದುರ್ಬಳಕೆ ಮಾಡಿಕೊಳ್ಳುವುದು ಸೇರಿದಂತೆ 55 ಬಗೆಯ ಅಪರಾಧಗಳಿಗೆ ಶಿಕ್ಷೆ ಪ್ರಮಾಣ ನಿಗದಿಪಡಿಸಿ ನ.27ರಂದು ನಗರಾಭಿವೃದ್ಧಿ ಇಲಾಖೆಯು ಕರಡು ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಸಾರ್ವಜನಿಕರ ಆಕ್ಷೇಪಣೆ ಮತ್ತು ಸಲಹೆಗಳಿಗೆ 30 ದಿನಗಳಕಾಲಾವಕಾಶ ಕೊಡಲಾಗಿದೆ. ಬಳಿಕ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಸರ್ಕಾರದ ಹೆಚ್ಚುವರಿ ವಕೀಲ ಡಿ. ನಾಗರಾಜ್‌ ಹೈಕೋರ್ಟ್‌ಗೆ ಸಲ್ಲಿಸಿರುವ ಮೆಮೋದಲ್ಲಿ ವಿವರಿಸಿದ್ದಾರೆ.

ಅರ್ಜಿದಾರರ ವಾದವೇನು?: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅನಧಿಕೃತ ಕಟ್ಟಡಗಳ ನಿರ್ಮಾಣ ಅವ್ಯಾಹತವಾಗಿ ನಡೆಯುತ್ತಿವೆ. ಈ ಎಲ್ಲ ಅಕ್ರಮಗಳಿಗೆ ಸಂಬಂಧಪಟ್ಟ ವಲಯಗಳ ಇಂಜಿನಿಯರ್‌ಗಳೇ ಹೊಣೆಯಾಗಿದ್ದಾರೆ. ಇಂಥ
ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿ ಕರ್ನಾಟಕ ಪೌರ ನಿಗಮ ಕಾಯ್ದೆ-1976ಕ್ಕೆ 2007ರಲ್ಲಿ ತಿದ್ದುಪಡಿ ತರಲಾಗಿದೆ. ಆದರೆ, ಶಿಕ್ಷೆ ಹೇಗಿರಬೇಕು, ಯಾವ ಪ್ರಮಾಣದಲ್ಲಿರಬೇಕು ಎಂಬ ಬಗ್ಗೆ ಸರ್ಕಾರ ಈ ವರೆಗೂ ಯಾವುದೇ ಮಾರ್ಗಸೂಚಿ ಅಥವಾ ಅಧಿಸೂಚನೆ ಹೊರಡಿಸಿಲ್ಲ. ಇದರಿಂದಾಗಿ ಕಳೆದ 11 ವರ್ಷಗಳಿಂದ ಯಾವೊಬ್ಬ ಅಧಿಕಾರಿಗೂ ಶಿಕ್ಷೆಯಾಗಿಲ್ಲ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳಿಗೆ ಕಾಯ್ದೆ ಪ್ರಕಾರ ವಿಧಿಸುವ ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣವನ್ನು ನಿಗದಿಪಡಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಕರಡು ಅಧಿಸೂಚನೆಗೆ ಸಂಬಂಧಿಸಿದ ಸರ್ಕಾರದ ಪರ ವಕೀಲರ ಮೆಮೋ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next