Advertisement

ಪತ್ನಿ ಮೃತಪಟ್ಟಿದ್ದಾಳೆಂದು ನಕಲಿ ಪ್ರಮಾಣ ಪತ್ರ ತಯಾರಿಸಿ ಪಾಲಿಸಿ ಹಣ ಪಡೆದವನಿಗೆ ಜೈಲು

10:50 AM Jan 07, 2022 | Team Udayavani |

ಮಂಗಳೂರು: ಪತ್ನಿ ಮೃತಪಟ್ಟಿದ್ದಾಳೆ ಎಂದು ನಕಲಿ ಪ್ರಮಾಣಪತ್ರ ತಯಾರಿಸಿ ಜೀವವಿಮೆ ಪಾಲಿಸಿಯ ಹಣ ಪಡೆದ ವ್ಯಕ್ತಿಗೆ ಮೂರೂವರೆ ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ಮಂಗಳೂರಿನ 2ನೇ ಸಿಜೆಎಂ ನ್ಯಾಯಾಲಯ ತೀರ್ಪು ನೀಡಿದೆ.

Advertisement

ಶಿವರಾಮ ಶೆಣೈ (55) ಈ ಪ್ರಕರಣದ ಆರೋಪಿ. ಈತ ನಗರದ ಕೆಎಸ್‌ ರಾವ್‌ ರಸ್ತೆಯ ಪಾಪ್ಯುಲರ್‌ ಬಿಲ್ಡಿಂಗ್‌ನಲ್ಲಿರುವ ಜೀವವಿಮೆ ಕಚೇರಿಯಲ್ಲಿ ತನ್ನ ಪತ್ನಿ ಸುಮನಾ ಶೆಣೈ ಹೆಸರಿನಲ್ಲಿ ಇದ್ದ 2 ಎಲ್‌ಐಸಿ ಪಾಲಿಸಿಗಳಿಗೆ ತನ್ನನ್ನು ನಾಮ ನಿರ್ದೇಶಿತ ವ್ಯಕ್ತಿಯನ್ನಾಗಿ ಮಾಡಿಕೊಂಡಿದ್ದ. ಪತ್ನಿ ಜೀವಂತ ಇರುವಾಗಲೇ 20-8-2008ರಂದು ಮೃತಪಟ್ಟಿರುವುದಾಗಿ ನಕಲಿ ಪ್ರಮಾಣಪತ್ರ ತಯಾರಿಸಿ 2 ಪಾಲಿಸಿಗಳಿಂದ ಒಟ್ಟು 3,96,922 ರೂ. ಹಣವನ್ನು ಚೆಕ್‌ ಮೂಲಕ ಪಡೆದುಕೊಂಡಿದ್ದ.

ಬಳಿಕ ಆ ಹಣವನ್ನು ತನ್ನ ಹಾಗೂ ಭಾರತಿ ಯಾನೆ ಭಾಗ್ಯಲಕ್ಷ್ಮೀ ಎಂಬವರ ಜಂಟಿ ಖಾತೆಗೆ ವರ್ಗಾಯಿಸಿ ನಗದೀಕರಿಸಿಕೊಂಡಿದ್ದ. ಈ ಬಗ್ಗೆ ಆಗಿನ ಜೀವ ವಿಮಾ ನಿಗಮದ ಶಾಖಾ ಮ್ಯಾನೇಜರ್‌ ಗಣೇಶ್‌ ಕಾಮತ್‌ ಬಂದರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2ನೇ ಆರೋಪಿ ಭಾರತಿ ಯಾನೆ ಭಾಗ್ಯಲಕ್ಷ್ಮೀ ತಲೆಮರೆಸಿಕೊಂಡಿರುವುದರಿಂದ ಆಕೆಯ ವಿರುದ್ಧದ ಪ್ರಕರಣವನ್ನು ಬೇರ್ಪಡಿಸಲಾಗಿದೆ. ಸರಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮೋಹನ್‌ ಕುಮಾರ್‌ ಬಿ. ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next