ಬೆಂಗಳೂರು: ಮದ್ಯಪಾನ ಮಾಡಿ, ಅಡ್ಡಾ-ದಿಡ್ಡಿ ಕಾರು ಚಲಾಯಿಸಿ ಪಂಕ್ಚರ್ ಅಂಗಡಿ ಸಿಬ್ಬಂದಿ ಸಾವಿಗೆ ಕಾರಣನಾಗಿದ್ದ ಟೆಕಿಯೊಬ್ಬನಿಗೆ ಕೃತ್ಯ ನಡೆದ 5 ವರ್ಷಗಳ ಬಳಿಕ ಜೈಲು ಶಿಕ್ಷೆಯಾಗಿದೆ.
ಉತ್ತರ ಭಾರತ ಮೂಲದ ಎಲೆಕ್ಟ್ರಾನಿಕ್ ಸಿಟಿ ಹೊಸೂರು ರಸ್ತೆಯ ಲವ್‌ಕುಶ್ ನಗರದ ನಿವಾಸಿ 32 ವರ್ಷದ ಕುನಾಲ್ ಕಿಶೋರ್ ಅಪರಾಧಿ.
ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ 36 ವರ್ಷದ ದಸ್ತಗಿರ್ ಮೃತಪಟ್ಟವ. ಕುನಾಲ್ ನಗರದ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿ ನಿಯರ್ ಆಗಿ ಕಾರ್ಯನಿರ್ವಹಿ ಸುತ್ತಿದ್ದ. 2017ರ ಡಿ.28ರಂದು ಸಂಜೆ ಮದ್ಯಪಾನ ಮಾಡಿ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನಾಥಪುರ ಜಂಕ್ಷನ್ ಕಡೆಯಿಂದ ರಾಯಸಂದ್ರದ ಕಡೆಗೆ ಅಡ್ಡಾ-ದಿಡ್ಡಿಯಾಗಿ ಅಜಾಗರೂ ಕತೆಯಿಂದ ಐಷಾರಾಮಿ ಫೋಲ್ಸ್ ವ್ಯಾಗನ್ ಪೋಲೋ ಕಾರು ಚಾಲನೆ ಮಾಡಿಕೊಂಡು ಹೊರಟಿದ್ದ. ಮಾರ್ಗ ಮಧ್ಯೆ ಬಾಷ್ ಕಂಪನಿ ಮುಂಭಾಗದ ರಸ್ತೆ ಬದಿ ದ್ವಿಚಕ್ರವಾಹನಕ್ಕೆ ಪಂಕ್ಚರ್ ಹಾಕುತ್ತಿದ್ದ ದಸ್ತಗಿರ್‌ಗೆ ಕುನಾಲ್ ಕಾರು ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ 6-8 ಅಡಿ ಮೇಲಕ್ಕೆ ಹಾರಿದ ದಸ್ತಗಿರ್ ರಸ್ತೆಗೆ ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದ. ಇಷ್ಟಕ್ಕೆ ಸುಮ್ಮನಾಗದ ಕುನಾಲ್ ತಪ್ಪಿಸಿಕೊಳ್ಳುವ ಭರದಲ್ಲಿ ಮತ್ತೆ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿ ಪಕ್ಕದಲ್ಲಿ ನಿಂತಿದ್ದ ಸ್ಕೂಟರ್‌ಗೆ ಗುದ್ದಿದ್ದ. ನಂತರ ಅದೇ ವೇಗದಲ್ಲಿ ಮುಂದೆ ಸಾಗಿ ಮತ್ತೂಂದು ಸ್ಕೂಟರ್, 2 ಬೈಕ್‌ಗೆ ಡಿಕ್ಕಿ ಹೊಡೆದಿದ್ದ. ಇದರಿಂದ 4 ದ್ವಿಚಕ್ರವಾಹನಗಳೂ ಸಂಪೂರ್ಣ ಜಖಂಗೊಂಡು ಇಬ್ಬರು ಸವಾರರಿಗೆ ಗಂಭೀರವಾಗಿ ಗಾಯಗಳಾಗಿತ್ತು.
5 ವರ್ಷ ಶಿಕ್ಷೆ, 2.5 ಲಕ್ಷ ರೂ.ದಂಡ: ಇತ್ತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸರು ಕೃತ್ಯದಲ್ಲಿ ಜಖಂಗೊಂಡಿದ್ದ 4 ದ್ವಿಚಕ್ರವಾಹನಗಳ ವರದಿ ಸಿದ್ಧಪಡಿಸಿದ್ದರು. ವಾಹನ ಮಾಲೀಕರ ಹೇಳಿಕೆ, ಕಾರು ಡಿಕ್ಕಿ ಹೊಡೆದು ದಸ್ತಗಿರ್ ಮೃತಪಟ್ಟಿರುವುದಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿ, ಕೃತ್ಯ ನೋಡಿದ ಪ್ರತ್ಯಕ್ಷದರ್ಶಿಗಳ ಹೇಳಿಕೆ ಸೇರಿ ಇನ್ನಿತರ ಪ್ರಮುಖ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ 2018ರಲ್ಲಿ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 2018 ರಿಂದ 2022ರ ವರೆಗೆ 4 ವರ್ಷಗಳ ಕಾಲ ಸುದೀರ್ಘವಾಗಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಿದ್ದ ಸಾಕ್ಷ್ಯಾಧಾರ, ಗಾಯಗೊಂಡವರು ಹಾಗೂ ಮೃತ ದಸ್ತಗಿರ್ ಪತ್ನಿ ಕೋರ್ಟ್‌ನಲ್ಲಿ ನುಡಿದ ಸಾಕ್ಷ್ಯವನ್ನು ಪರಿಗಣಿಸಿದ ನ್ಯಾಯಾಧೀಶ ಆರ್.ರವೀಂದ್ರ ಅವರು ಅ.14ರಂದು ಕುನಾಲ್‌ನನ್ನು ಅಪರಾಧಿ ಎಂದು ಪರಿಗಣಿಸಿ, ಆತನಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 2.5 ಲಕ್ಷ ರೂ. ದಂಡ ವಿಧಿಸಿದ್ದರು. ಸರ್ಕಾರದ ಪರ ಕೆ.ಡಿ.ಸುರೇಶ್ ವಾದ ಮಂಡಿಸಿದ್ದರು.
ಜಾಮೀನಿನ ಮೇಲೆ ಹೊರ ಬಂದಿದ್ದ : ತೀವ್ರ ಸ್ವರೂಪದ ರಸ್ತೆ ಅಪಘಾತವಾಗಿದ್ದರೂ ಕಂಗೆಡದ ಕುನಾಲ್ ಮತ್ತೆ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದ. ಆತಂಕಗೊಂಡ ಸಾರ್ವಜನಿಕರು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರ್ಯ ಪ್ರವೃತ್ತರಾದ ಪೊಲೀಸರು ಕುನಾಲ್ ಕಾರನ್ನು ಬೆನ್ನಟ್ಟಿ ವಶಕ್ಕೆ ಪಡೆದು ಆಲ್ಕೋ ಮೀಟರ್‌ನಲ್ಲಿ ಪರೀಕ್ಷಿಸಿದ್ದರು. ಆ ವೇಳೆ ಅತಿಯಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು ಧೃಢಪಟ್ಟಿತ್ತು. ಕೂಡಲೇ ಪೊಲೀಸರು ಕುನಾಲ್‌ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಆದರೆ, ತನ್ನ ಪ್ರಭಾವ ಬಳಿಸಿದ್ದ ಕುನಾಲ್ ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದ.