ಒಂದೇ ಬೆಳೆಯನ್ನು ನಂಬಿ ಕೃಷಿ ಮಾಡಿದಲ್ಲಿ ಕೈಸುಟ್ಟುಕೊಳ್ಳಬೇಕಾದ ಸಾಧ್ಯತೆ ಹೆಚ್ಚು. ಆದ್ದರಿಂದಲೇ ಮುಖ್ಯ ಕೃಷಿಯೊಡನೆ ಉಪ ಬೆಳೆಗಳನ್ನೂ ಬೆಳೆಯಬೇಕು ಎನ್ನುವುದು ಕೃಷಿ ತಜ್ಞರ ಅಭಿಪ್ರಾಯ. ಈ ನಿಟ್ಟಿನಲ್ಲಿ ರೈತರಿಗೆ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ಉಪ ಬೆಳೆ ಜಾಯಿ ಕಾಯಿ. ತೆಂಗಿನ ಅಥವಾ ಅಡಿಕೆ ತೋಟಗಳ ನಡುವೆ ಇದನ್ನು ಉಪ ಬೆಳೆಯಾಗಿ ಬೆಳೆಯಬಹುದು.
ಬೆಳೆ ಹೇಗೆ?
ಸಾಮಾನ್ಯವಾಗಿ ಗಿಡಗಳನ್ನು ನೆಡುವಾಗ ಒಂದೂವರೆ ಅಡಿಗಿಂತ ಹೆಚ್ಚು ಎತ್ತರ ಬೆಳೆದಿರುವ ಗಿಡಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಕಸಿ ಸಸಿಗಳಿಗಿಂತ ಬೀಜದಿಂದ ಮೊಳಕೆ ಒಡೆದ ಸಸಿಗಳೇ ಉತ್ತಮ. ಕಸಿ ಗಿಡಗಳು ಫಸಲು ನೀಡಲು ಸಾಮಾನ್ಯವಾಗಿ 3 ವರ್ಷಗಳನ್ನು ತೆಗೆದು ಕೊಂಡರೆ ಸಾಮಾನ್ಯವಾಗಿ ಮೊಳಕೆಯೊಡೆದ ಗಿಡಗಳು 6 ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಈ ಗಿಡಗಳಿಗೆ ನೆರಳಿನ ಆವಶ್ಯಕತೆಯಿದ್ದು, ಬೇಸಗೆಯಲ್ಲಿ ಗಿಡಗಳು ಹೆಚ್ಚಾಗಿ ಬಾಡಲು ಆರಂಭಿಸುವುದರಿಂದ ನೀರಿನ ಪೂರೈಕೆ ಮಾಡಬೇಕಾಗುತ್ತದೆ.
ಈ ಗಿಡಗಳಿಗೆ ಜಾಸ್ತಿ ಆರೈಕೆಯ ಆವಶ್ಯಕತೆಯಿರುವುದಿಲ್ಲ. ವರ್ಷಕ್ಕೊಮ್ಮೆ ಗೊಬ್ಬರ, ಪೊಟ್ಯಾಷಿಯಂಗಳನ್ನು ಹಾಕಿದರೆ ಸಾಕಾಗುತ್ತದೆ. ಗಿಡ ಬೆಳೆದ ಹಾಗೆ ಫಸಲಿನ ಪ್ರಮಾಣವೂ ಹೆಚ್ಚುತ್ತ ಹೋಗುತ್ತದೆ. ಈ ಗಿಡಗಳು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಫಲ ನೀಡುತ್ತವೆ. ಜೂನ್‌ನಿಂದ ಸೆಪ್ಟಂಬರ್ ತಿಂಗಳ ಅವಧಿ ಹೇರಳವಾಗಿ ಜಾಯಿಕಾಯಿ ಫಸಲು ನೀಡುವ ಕಾಲವಾಗಿದೆ.
ಉತ್ತಮ ಬೆಲೆ
ಸಾಂಬಾರ ಪದಾರ್ಥವಾಗಿ ಜಾಯಿಕಾಯಿ ಹೆಚ್ಚು ಬಳಕೆಯಾಗುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಜಾಯಿಕಾಯಿ ಮತ್ತು ಅದರ ಪತ್ರೆಗೆ ಬೆಲೆಯ ನಡುವೆ ವ್ಯತ್ಯಾಸವಿದ್ದು, ಪತ್ರೆ ಹೆಚ್ಚು ಬೆಲೆ ಬಾಳುತ್ತದೆ. ಒಂದು ಎಕರೆಯಲ್ಲಿ ಸಾಮಾನ್ಯವಾಗಿ 125-150 ಗಿಡಗಳನ್ನು ನೆಡಬಹುದಾಗಿದ್ದು, ಗಿಡವೊಂದರ ಕನಿಷ್ಠ ಆಯಸ್ಸು ಸುಮಾರು 150 ವರ್ಷಗಳಾಗಿವೆ. ಗೊಂಚಲು ಗೊಂಚಲುಗಳಲ್ಲಿ ಈ ಗಿಡಗಳು ಫಲ ನೀಡಲಿದ್ದು, ಬೆಳೆದ ಜಾಯಿಕಾಯಿಗಳು ಓಡಿನಿಂದ ಬೇರ್ಪಟ್ಟು ನೆಲಕ್ಕೆ ಬೀಳುತ್ತವೆ. ಇವುಗಳನ್ನು ಆಯ್ದು ಪತ್ರೆಯನ್ನು ಬೇರ್ಪಡಿಸಿ ಒಣಗಿಸಬೇಕಾಗುತ್ತದೆ. ಸಾಮಾನ್ಯವಾಗಿ ಮಳೆ ಸಮಯದಲ್ಲಿಯೇ ಬೆಳೆ ಹೆಚ್ಚಿರುವ ಕಾರಣ ಇವುಗಳನ್ನು ಒಣಗಿಸಲು ಬಿಸಿಲು ಇರುವುದಿಲ್ಲ. ಹಾಗಾಗಿ ಮನೆಯ ಅಡುಗೆ ಕೋಣೆಯ ಸ್ಟೌಗಳ ಕೆಳಗೆ ಅಥವಾ ಪ್ರತ್ಯೇಕ ಕಟ್ಟಿಗೆಯ ಗೂಡನ್ನು ತಯಾರಿಸಿ ಅವುಗಳಲ್ಲಿ ಒಣಗಿಸುವ ಪದ್ಧತಿಗಳು ಹಳ್ಳಿಗಳಲ್ಲಿ ಇರುವುದನ್ನು ಗಮನಿಸಬಹುದು.