Advertisement

ವಾರಕ್ಕೊಮ್ಮೆ ಸೈಕಲ್-ಸಾರ್ವಜನಿಕ ಸಾರಿಗೆಗೆ ಜೈ

09:42 AM May 19, 2019 | Suhan S |

ಧಾರವಾಡ: ವಿಶ್ವ ಪರಿಸರ ದಿನ ಅಂಗವಾಗಿ ಪ್ರತಿ ಸೋಮವಾರ ಜಿಲ್ಲೆಯ ನ್ಯಾಯಾಧೀಶರು, ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ ಗ್ರಾಮ, ತಾಲೂಕು ಮಟ್ಟದ ನೌಕರರು ಸರ್ಕಾರಿ ವಾಹನಗಳನ್ನು ಉಪಯೋಗಿಸದೇ ಬೈಸಿಕಲ್ ಅಥವಾ ಸಾರ್ವಜನಿಕ ಸಾರಿಗೆ ಮೂಲಕ ಸಂಚರಿಸುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

Advertisement

ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ವಿಶ್ವಪರಿಸರ ದಿನಾಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇನ್ಮುಂದೆ ಎಲ್ಲ ಗೆಜೆಟೆಡ್‌, ನಾನ್‌ ಗೆಜೆಟೆಡ್‌ ಅಧಿಕಾರಿಗಳು, ನೌಕರರು ಖಾಸಗಿ ಅಥವಾ ಸರ್ಕಾರಿ ವಾಹನಗಳನ್ನು ಬಳಸದೆ ಪ್ರತಿ ಸೋಮವಾರ ವಾರಕ್ಕೊಂದು ದಿನ ತಮ್ಮ ಕಚೇರಿಗಳಿಗೆ ಕಾಲ್ನಡಿಗೆ, ಬೈಸಿಕಲ್ ಅಥವಾ ಸಾರ್ವಜನಿಕ ಸಾರಿಗೆ ಮೂಲಕ ಆಗಮಿಸಬೇಕು. ಈ ಮೂಲಕ ಜನಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ. ಈ ಕಾರ್ಯಕ್ರಮಕ್ಕೆ ಜೂ. 5ರಂದು ಚಾಲನೆ ನೀಡಲಾಗುವುದು. ಪ್ರತಿ ಸೋಮವಾರ ಆಚರಿಸಲಾಗುವುದು ಎಂದರು.

ಲಕ್ಷ ಸಸಿ ನೆಡುವ ಗುರಿ: ಜೂ.5ರಂದು ಜಿಲ್ಲಾದ್ಯಂತ 1 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗುವುದು. ಕೇವಲ ಸಸಿ ನೆಡುವುದು ಅಷ್ಟೇ ಅಲ್ಲ ಅವುಗಳನ್ನು ಸಂರಕ್ಷಿಸಿ ಬೆಳೆಸುವುದು ಬಹಳ ಮುಖ್ಯ. ಅವಳಿ ನಗರ ಹಾಗೂ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಪ್ಲಾಸ್ಟಿಕ್‌ ನಿಷೇಧಕ್ಕೆ ಹೆಚ್ಚು ಒತ್ತು ನೀಡಬೇಕು. ಸಣ್ಣ ವ್ಯಾಪಾರ, ಹೋಟೆಲ್ಗಳಲ್ಲಿ ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಬೇಕು. ಪರಿಸರ ದಿನದಂದು ನೆಟ್ಟ ಗಿಡಗಳಿಗೆ ಸ್ಥಳೀಯ ನಾಗರಿಕರ ಸಮ್ಮತಿ ಪಡೆದು ಅವರಿಗೆ ದತ್ತು ನೀಡಿ ಸಂರಕ್ಷಿಸಿ ಬೆಳೆಸುವ ಜವಾಬ್ದಾರಿ ಜತೆಗೆ ಅರಣ್ಯ ಇಲಾಖೆ ಮೂಲಕ ಗಿಡದ ಮಾಲೀಕತ್ವ ದೊರಕಿಸಿ ಕೊಡಲಾಗುವುದು ಎಂದು ಹೇಳಿದರು.

ರಸ್ತೆ ಪಕ್ಕ ಸಸಿ ಕಡ್ಡಾಯ: ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಜೂ. 11ರಂದು ‘ಸ್ವಚ್ಛಮೇವ ಜಯತೇ’ ಕಾರ್ಯಕ್ರಮ ಅಂಗವಾಗಿ 100 ಗ್ರಾಪಂಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಒಟ್ಟು 1 ಲಕ್ಷ ಸಸಿಗಳನ್ನು ನೆಡಲು ಅಂಗನವಾಡಿ, ಶಾಲೆ, ರೈತ ಸಂಪರ್ಕ ಕೇಂದ್ರ, ಮತ್ತಿತರ ಸಾರ್ವಜನಿಕ ಸ್ಥಳಗಳನ್ನು ಗುರುತಿಸಲಾಗಿದೆ. ಇನ್ಮುಂದೆ ರಸ್ತೆ ಕಾಮಗಾರಿ ಕೈಗೊಳ್ಳುವಾಗ ಕಡ್ಡಾಯವಾಗಿ ಸಸಿ ನೆಡುವ ಯೋಜನೆ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಸರ್ಕಾರಿ ಕಟ್ಟಡಗಳ ಮೇಲ್ಛಾವಣಿಯಲ್ಲಿ ತೋಟ, ಮಳೆನೀರು ಕೊಯ್ಲು ಅಳವಡಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 175 ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಉದ್ಯಾನ ಸ್ವಚ್ಛತೆ: ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಪ್ರಶಾಂತಕುಮಾರ ಮಿಶ್ರಾ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, 30000 ಸಸಿ ನೆಡುವ ಹಾಗೂ ಅಂದು ಪಾಲಿಕೆ ಎಲ್ಲ ಅಧಿಕಾರಿಗಳು, ನೌಕರರು ಸರ್ಕಾರಿ-ಖಾಸಗಿ ವಾಹನಗಳನ್ನು ಬಳಸದೇ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು.

Advertisement

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಅಧಿಕಾರಿ ವಿಜಯಕುಮಾರ ಕಡಕ್‌ಬಾವಿ ಮಾತನಾಡಿ, ಈ ಬಾರಿ ವಾಯುಮಾಲಿನ್ಯ ನಿಯಂತ್ರಣದ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ, ರ್ಯಾಲಿ ಮೊದಲಾದ ಚಟುವಟಿಕೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಹೇಶಕುಮಾರ, ಇ.ಎಸ್‌. ಡಿಸೋಜಾ, ದೇಶಪಾಂಡೆ ಫೌಂಡೇಶನ್‌ ಸಿಇಒ ವಿವೇಕ್‌ ಪವಾರ, ಓಟಿಲಿ ಅನ್ಬನ್‌ಕುಮಾರ್‌, ಪಿ.ವಿ. ಹಿರೇಮಠ, ಶಂಕರ ಕುಂಬಿ, ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ವಿಜಯಕುಮಾರ್‌ ಚೌರಾಸಿಯಾ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next