Advertisement

Karnataka Assembly Joint Session ಸದನದಲ್ಲಿ ಜೈ ಶ್ರೀರಾಮ್‌ ವರ್ಸಸ್‌ ಜೈ ಭೀಮ್‌ ಘೋಷಣೆ

12:34 AM Feb 13, 2024 | Shreeram Nayak |

ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಭಾಷಣ ಮುಗಿಸಿ ತೆರಳುತ್ತಿದ್ದಂತೆ ವಿಧಾನಸಭೆಯಲ್ಲಿ “ಜೈ ಶ್ರೀರಾಮ್‌’ ಹಾಗೂ “ಜೈ ಭೀಮ್‌’ ಘೋಷಣೆ ಮೊಳಗಿದೆ.

Advertisement

ಅಯೋಧ್ಯೆಯಲ್ಲಿ ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬಿಜೆಪಿಯ ಎಲ್ಲ ಶಾಸಕರು ಸದನಕ್ಕೆ ಕೇಸರಿ ಶಾಲು ಧರಿಸಿ ಆಗಮಿಸಿದ್ದರು. ರಾಜ್ಯಪಾಲರು ಸದನದಿಂದ ತೆರಳುತ್ತಿದ್ದಂತೆ ಶಾಸಕ ವಿ.ಸುನಿಲ್‌ ಕುಮಾರ್‌ “ಜೈ ಶ್ರೀರಾಮ್‌’ ಎಂದು ಕೂಗುತ್ತಿದ್ದಂತೆ ವಿಪಕ್ಷದ ಪಾಳಯದಿಂದ “ಜೈ ಶ್ರೀರಾಮ್‌, ಜೈ ಜೈ ಶ್ರೀರಾಮ್‌’ ಎಂಬ ಘೋಷಣೆ ಮೊಳಗಲಾರಂಭಿಸಿತು.

ಬಿಜೆಪಿಯವರ ಈ ನಡೆಯಿಂದ ಆಡಳಿತ ಪಕ್ಷದ ಶಾಸಕರು, ಅದರಲ್ಲೂ ವಿಶೇಷವಾಗಿ ಮುಂದಿನ ಸಾಲಿನಲ್ಲಿ ಕುಳಿತ ಸಚಿವರು ಕಕ್ಕಾಬಿಕ್ಕಿಯಾದರು. ಆದರೆ ಎರಡನೇ ಸಾಲಿನಲ್ಲಿ ಕುಳಿತಿದ್ದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ “ಜೈ ಭೀಮ್‌’ ಘೋಷಣೆ ಮೊಳಗಿಸಿದರು. ಕಾಂಗ್ರೆಸ್‌ನ ಇತರ ಶಾಸಕರು ಈ ಘೋಷಣೆ ಕೂಗುವುದಕ್ಕೆ ಮೊದಲೇ ರಾಷ್ಟ್ರಗೀತೆ ಪ್ರಾರಂಭವಾಯಿತು. ಹೀಗಾಗಿ ಆಡಳಿತ-ವಿಪಕ್ಷದ ಸ್ಲೋಗನ್‌ ವಾರ್‌ ಇಷ್ಟಕ್ಕೇ ಕೊನೆಯಾಯಿತು.

ಕೇಸರಿ ಅವರ ಮನೆ ಆಸ್ತಿಯೇ? ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಅವರು ಧರ್ಮದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅವರು (ಬಿಜೆಪಿ) ಏನಾದರೂ ಹಾಕಿಕೊಂಡು ಬರಲಿ. ಕೇಸರಿಯಾದರೂ ಧರಿಸಲಿ, ಕಪ್ಪಾದರೂ ಧರಿಸಲಿ. ನಮ್ಮ ರಾಜ್ಯದ ಹಿತಕ್ಕೆ ಬೇಕಾದ ಕೆಲಸ ನಾವು ಮಾಡುತ್ತೇವೆ.
-ಡಿ.ಕೆ.ಶಿವಕುಮಾರ್‌, ಡಿಸಿಎಂ

ಕಾಂಗ್ರೆಸ್‌ ಶಾಸಕ ರವಿಗೆ ಕೇಸರಿ ಶಾಲು
ಬೆಂಗಳೂರು: ಅಧಿವೇಶನದ ಮೊದಲ ದಿನವಾದ ಸೋಮವಾರ ಕೇಸರಿ ಶಾಲು ಧರಿಸಿ ಬಂದಿದ್ದ ಬಿಜೆಪಿ ಸದಸ್ಯರು, ಕಾಂಗ್ರೆಸ್‌ ಶಾಸಕ ರವಿ ಗಣಿಗ ಕೊರಳಿಗೂ ಕೇಸರಿ ಶಾಲು ಹಾಕಿ ಕಿಚಾಯಿಸಿದ ಪ್ರಸಂಗ ನಡೆಯಿತು.

Advertisement

ಇತ್ತೀಚೆಗೆ ಮಂಡ್ಯದ ಕೆರಗೋಡಿ ನಲ್ಲಿ ಹನುಮಧ್ವಜವನ್ನು ಕೆಳಗಿಳಿಸಿದ ಪ್ರಸಂಗದಿಂದ ಇಡೀ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತಲ್ಲದೆ, ಶಾಸಕರ ವಿರುದ್ಧವೇ ಗ್ರಾಮಸ್ಥರು ತಿರುಗಿ ಬಿದ್ದಿದ್ದರು. ಬಿಜೆಪಿ ಸದಸ್ಯರೂ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಸೋಮವಾರ ಜಂಟಿ ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಮುಖಾಮುಖಿಯಾದ ಶಾಸಕರು, ಪರಸ್ಪರ ಕೈ ಕುಲುಕಿ ಕುಶಲೋಪರಿ ವಿಚಾರಿಸುತ್ತಿದ್ದರು.

ವಿಧಾನಸಭೆಯ ಆವರಣದಲ್ಲಿ ಮುನಿರತ್ನ, ವಿ.ಸುನಿಲ್‌ ಕುಮಾರ್‌ ಮಾತನಾಡುತ್ತಾ ನಿಂತಿದ್ದರು. ಅಲ್ಲಿಗೆ ಬಂದ ಕಾಂಗ್ರೆಸ್‌ ಶಾಸಕ ರವಿ, ಮುನಿರತ್ನರನ್ನು ಮಾತನಾಡಿಸಿದರು. “ಏನಣ್ಣಾ ವಿಶೇಷ’ ಎಂದುಕೊಂಡು ಬಂದ ರವಿಯನ್ನು ಕಂಡು ಕೈ ಕುಲುಕಿದ ಮುನಿರತ್ನ, ತಮ್ಮ ಹೆಗಲ ಮೇಲಿದ್ದ ಕೇಸರಿ ಶಾಲನ್ನು ರವಿ ಕೊರಳಿಗೆ ಹಾಕಲು ಮುಂದಾದರು. ಅಲ್ಲದೆ, ಕೇಸರಿ ಶಾಲು ಹಾಕಬಹುದಾ ಎಂದು ಮುನಿರತ್ನ ಮುಂದೆ ಬರುತ್ತಿದ್ದಂತೆ, ಯಾಕೆ ಹಾಕಲ್ಲ? ನಾವೂ ಹಿಂದೂಗಳೇ ಎನ್ನುತ್ತಾ ಕೇಸರಿ ಶಾಲು ಹಾಕಿಸಿಕೊಂಡು ಕೆಮರಾಗಳಿಗೆ ಪೋಸು ಕೊಟ್ಟರು.

 

Advertisement

Udayavani is now on Telegram. Click here to join our channel and stay updated with the latest news.

Next