Advertisement

ಜೈ ಜವಾನ್‌-ಜೈ ಕಿಸಾನ್‌, ಜೈ ಪೊಲೀಸ್‌

09:33 AM Oct 22, 2021 | Team Udayavani |

ಕಲಬುರಗಿ: ಪೊಲೀಸರು ತಮ್ಮ ಜೀವವನ್ನೇ ಪಣಕ್ಕಿಟ್ಟು ಕಾನೂನು ಸುವ್ಯವಸ್ಥೆ ನಿಭಾಯಿಸುವಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಕೆ. ಸುಬ್ರಹ್ಮಣ್ಯ ಹೇಳಿದರು.

Advertisement

ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೊಲೀಸ್‌ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪೊಲೀಸರ ಸೇವೆ ಮತ್ತು ತ್ಯಾಗ ಮರೆಯಲಾರದಂತದ್ದು. ದೇಶ, ರಾಜ್ಯ ಮತ್ತು ನಾಗರಿಕರ ಪ್ರಾಣ ರಕ್ಷಣೆಯಲ್ಲಿ ಪೊಲೀಸರು ಪ್ರಮುಖವಾಗಿದ್ದಾರೆ. ಅವರ ಸೇವೆಯನ್ನು ಯಾರೂ ಮರೆಯುವಂತಿಲ್ಲ ಎಂದರು.

1959ರಲ್ಲಿ ಚೀನಾದ ಸೈನಿಕರು ದೇಶದ ಗಡಿಯಲ್ಲಿ ನುಸುಳಿ ನಮ್ಮ ಪೊಲೀಸರನ್ನು ಹತ್ಯೆ ಮಾಡಿದರು. 1960ರಲ್ಲಿ ನಡೆದ ಪೊಲೀಸ್‌ ಮಹಾನಿರ್ದೇಶಕರ ಸಭೆಯಲ್ಲಿ ಹುತಾತ್ಮ ಪೊಲೀಸರ ಗೌರವಾರ್ಥ ಪ್ರತಿ ವರ್ಷ ಹುತಾತ್ಮ ದಿನಾಚರಣೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಜೈ ಜವಾನ್‌, ಜೈ ಕಿಸಾನ್‌ ಎಂಬ ಘೋಷ ವಾಕ್ಯದ ಜತೆಗೆ ಜೈ ಪೊಲೀಸ್‌ ಎಂಬುದನ್ನು ಸೇರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ಡಾ| ನೀಲಾ ಚಿತ್ರ ಅಂತಾರಾಷ್ಟ್ರೀಯ ಆನ್‌ಲೈನ್‌ ಪ್ರದರ್ಶನಕ್ಕೆ ಆಯ್ಕೆ

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಿಮಿ ಮರಿಯಂ ಜಾರ್ಜ್‌, ಕಳೆದ ಒಂದು ವರ್ಷದಲ್ಲಿ ರಾಜ್ಯ ಮತ್ತು ದೇಶಾದ್ಯಂತ ಮಡಿದ ಹುತಾತ್ಮ ಪೊಲೀಸರ ಹೆಸರುಗಳನ್ನು ಓದಿ, ಅವರ ಬಲಿದಾನವನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಪೊಲೀಸ್‌ ಸ್ಮಾರಕಕ್ಕೆ ಗಣ್ಯರು ಪುಷ್ಪಗುತ್ಛ ಅರ್ಪಿಸಿ, ಗೌರವ ಸಲ್ಲಿಸಿದರು. ಜತೆಗೆ ಹುತಾತ್ಮ ದಿನದ ನಿಮಿತ್ತ ಮೌನಾಚರಣೆ ಮಾಡಲಾಯಿತು.

ಜಿಲ್ಲಾ ನ್ಯಾಯಾಧೀಶ ಸುಶಾಂತ ಎಂ.ಚೌಗಲೆ, ಈಶಾನ್ಯ ವಲಯ ಐಜಿಪಿ ಮನೀಷ ಖರ್ಬೀಕರ್‌, ನಗರ ಪೊಲೀಸ್‌ ಆಯುಕ್ತ ಡಾ| ವೈ.ಎಸ್‌.ರವಿಕುಮಾರ, ಉಪ ಪೊಲೀಸ್‌ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ, ಸಹಾಯಕ ಪೊಲೀಸ್‌ ಆಯುಕ್ತರಾದ ಅಂಶುಕುಮಾರ, ಜೆ.ಎಚ್‌.ಇನಾಮದಾರ ಹಾಗೂ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಮತ್ತು ಕುಟುಂಬದವರು, ಸಾರ್ವಜನಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next