Advertisement

ಜನಾರ್ಧನ್‌ ಹೋಟೆಲ್‌ಗೆ ಜೈ

06:25 PM Nov 06, 2017 | Team Udayavani |

ರಾಮನಗರದ ಮುಖ್ಯರಸ್ತೆಯಲ್ಲಿರುವ, 90ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಹೋಟೆಲ್‌ ಶ್ರೀ ಜನಾರ್ಧನ.
ಉದ್ಯಮಿಗಳು, ರಾಜಕೀಯ ಹಾಗೂ ಚಿತ್ರರಂಗದ ಬಹುತೇಕ ಗಣ್ಯರು ಇಲ್ಲಿನ ಮೈಸೂರು ಪಾಕ್‌ನ ರುಚಿಗೆ ಮಾರುಹೋಗಿದ್ದಾರೆ. ಬಾಯಲ್ಲಿಟ್ಟಾಕ್ಷಣ ಕರಗುವ ಮೈಸೂರು ಪಾಕ್‌ ಗ್ರಾಹಕರನ್ನು ಪದೇ ಪದೆ ಸೆಳೆಯುತ್ತದೆ. ಸಿಹಿ ತಿಂದ ಮೇಲೆ ಖಾರದ ರುಚಿಯೂ ಬೇಕಲ್ಲ! ಇಲ್ಲಿನ ಬೆಣ್ಣೆ ಮುರುಕು ನಾಲಿಗೆಯ ಈ ಬೇಡಿಕೆಯನ್ನೂ ತಣಿಸುತ್ತದೆ.

Advertisement

ಯಾರಾದರೂ ಧಾರವಾಡಕ್ಕೆ ಹೋದರೆ ಪೇಡ ತಗೊಂಡು ಬನ್ನಿ ಎಂದು ಹೇಳಿಕಳುಹಿಸುವಂತೆ ರಾಮನಗರದ ಕಡೆಗೆ ಬಂದವರಿಗೆ ಮೈಸೂರು ಪಾಕ್‌ ತಗೊಂಡು ಬನ್ನಿ ಎಂದು ಹೇಳಿ ಕಳುಹಿಸುವುದು ಸಾಮಾನ್ಯವಾಗಿಬಿಟ್ಟಿದೆ.

ಹೋಟೆಲ್‌ನ ಇತಿಹಾಸ ರಾಮನಗರದ ಶ್ರೀ ಜನಾರ್ಧನ ಹೋಟೆಲ್‌ಗೆ 91 ವರ್ಷಗಳ ಇತಿಹಾಸವಿದೆ. 1926ರಲ್ಲಿ ಜನಾರ್ಧನಯ್ಯ ಎಂಬುವರು ಅದನ್ನು ಸ್ಥಾಪಿಸಿದ್ದಾರೆ. ಇಲ್ಲಿ ಸಿದ್ದವಾಗುತ್ತಿದ್ದ ಸಾಂಪ್ರದಾಯಿಕ ತಿಂಡಿ, ತಿನಿಸುಗಳ ರುಚಿಗೆ
ಮಾರು ಹೋದ ಅಂದಿನ ಜನತೆ ಇದಕ್ಕೆ ಜನಾರ್ಧನ ಹೋಟೆಲ್‌ ಎಂದು ನಾಮಕರಣ ಮಾಡಿದ್ದಾರೆ. ಅದೇ ಹೆಸರು ಇಂದಿಗೂ ಉಳಿದುಕೊಂಡಿದೆ.

ಸಧ್ಯ ಈ ಹೋಟೆಲ್‌ನ ಉಸ್ತುವಾರಿಯನ್ನು ಜನಾರ್ಧನಯ್ಯ ಅವರ ಮೊಮ್ಮಗ, ಇಂಜಿನಿಯರಿಂಗ್‌ ಪದವಿ ಪಡೆದಿರುವ ಜಿ.ಪಿ.ಪ್ರಶಾಂತ್‌ ನಿರ್ವಹಿಸುತ್ತಿದ್ದಾರೆ. ಮೈಸೂರು ಪಾಕ್‌ನ್ನು ಖುದ್ದು ಇವರು ಮತ್ತು ಇವರ ಧರ್ಮಪತ್ನಿ ಗಾಯತ್ರಿ ಸಿದ್ದಪಡಿಸುತ್ತಾರೆ. 1962ರವರೆಗೆ ನಮ್ಮ ತಾತ ಜರ್ನಾರ್ಧನಯ್ಯ ಅವರು ಹೋಟೆಲ್‌ ನಡೆಸಿಕೊಂಡು ಬಂದರು.

ನಂತರ 2000ವರೆಗೆ ನನ್ನ ತಂದೆಯವರಾದ ಪರಮೇಶ್ವರಯ್ಯ ನಡೆಸಿದರು. ಅವರ ಕಾಲಾ ನಂತರ ತಾವು ಹೋಟೆಲ್‌ನ್ನು ನಿರ್ವಹಿಸುತ್ತಿರುವುದಾಗಿ ಜಿ.ಪಿ.ಪ್ರಶಾಂತ್‌ ಹೇಳುತ್ತಾರೆ. 91 ವರ್ಷಗಳ ಸುದೀರ್ಘ‌ ಇತಿಹಾಸದಲ್ಲಿ
ಮೈಸೂರುಪಾಕ್‌, ಬೆಣ್ಣೆ ಮುರುಕಿನ ರುಚಿಯಲ್ಲಿ ವ್ಯತ್ಯಾಸವಾಗಿಲ್ಲ . ತಯಾರಿಕಾ ವಿಧಾನವೂ ಬದಲಾಗಿಲ್ಲ. ಬೇಡಿಕೆ ಅಧಿಕವಾಗಿರುವುದರಿಂದ ಮತ್ತು ತಂತ್ರಜ್ಞಾನ ಅಭಿವೃದ್ದಿಯಾಗಿರುವುದರಿಂದ ಪಾಕ ತೆಗೆಯಲು ಯಂತ್ರವನ್ನು ಬಳಸುತ್ತಿದ್ದಾರೆ.

Advertisement

ತಾತನಿಂದ ಮೊಮ್ಮಗನವರೆಗೆ ರಾಮನಗರಕ್ಕೆ ಬರುವ ಮುನ್ನ ನಮ್ಮ ತಾತ ಜನಾರ್ಧನಯ್ಯ ಮಂಡ್ಯದಲ್ಲಿದ್ದರು. ಆ ಸಂದರ್ಭದಲ್ಲಿ ಅವರ ಸ್ನೇಹಿತರೊಬ್ಬರು ಮೈಸೂರು ಪಾಕ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ಪಾಕ ಪ್ರವೀಣರಾಗಿದ್ದ  ತನವರು ಕಡ್ಲೆಹಿಟ್ಟು, ತುಪ್ಪ, ಸಕ್ಕರೆಯನ್ನು ಸರಿ ಪ್ರಮಾಣದಲ್ಲಿ ಬೆರೆಸಿ ತಮ್ಮದೇ ವಿಧಾನವನ್ನು ಅನುಸರಿಸಿ ಮೈಸೂರು ಪಾಕ್‌ ಸಿದ್ದಪಡಿಸುತ್ತಿದ್ದರಂತೆ. ತಯಾರಿಕೆ ವಿದ್ಯೆ ತಾತನಿಂದ ನನ್ನ ತಂದೆ ಪರಮೇಶ್ವರಯ್ಯ ಅವರಿಗೂ, ತಂದೆಯವರಿಂದ ನನಗೂ ಒಲಿದಿದೆ. ಮೈಸೂರು ಪಾಕ್‌ ತಯಾರಿಕೆಯಲ್ಲಿ ಪಾಕ ತೆಗೆಯುವುದು ಮತ್ತು ಅಂತಿಮ ಸ್ಪರ್ಶ ನೀಡುವುದು ಬಹುಮುಖ್ಯವಾಗಿರುವುದರಿಂದ ನಾನೇ ಈ ಕೆಲಸ ಮಾಡುತ್ತೇನೆ ಎನ್ನುತ್ತಾರೆ ಪ್ರಶಾಂತ್‌.

ಮೈಸೂರು ಪಾಕ್‌ ತಯಾರಿಕೆಗೆ ನಾವೀಗ ಬ್ರಾಂಡಡೆಡ್‌ ತುಪ್ಪವನ್ನು ಬಳಸುತ್ತಿದ್ದೇವೆ. ಗುಣ ಮಟ್ಟದಲ್ಲಿ ಎಂದಿಗೂ ರಾಜಿ ಆಗುವುದಿಲ್ಲ ಎನ್ನುತ್ತಾರೆ ಪ್ರಶಾಂತ್‌.

ಇಲ್ಲಿ ಇನ್ನೇನು ಖ್ಯಾತಿ!
ಮೈಸೂರು ಪಾಕ್‌, ಬೆಣ್ಣೆ ಮುರುಕು ಜೊತೆಗೆ ಇಲ್ಲಿ ತಯಾರಾಗುವ ಬಾದಾಮ್‌ ಹಲ್ವ, ಖಾರಾ ಮಿಕ್ಸ್‌ ಕೂಡ ಗ್ರಾಹಕರ ಮೆಚ್ಚುಗೆ ಪಡೆದಿವೆ. ಇನ್ನುಳಿದಂತೆ ಇಲ್ಲಿ ಖಾಲಿ ದೋಸೆ, ಮಸಾಲೆ ದೋಸೆ, ಪುಳಿಯೊಗರೆ, ಲೆಮನ್‌ ರೈಸ್‌, ಪೂರಿ-ಸಾಗು, ಮೊಸರನ್ನ ಅತ್ಯಂತ ಬೇಡಿಕೆ ಇರುವ ತಿನಿಸು. ಬೆಳಿಗ್ಗೆ 7.30ರಿಂದ ರಾತ್ರಿ 9 ಗಂಟೆಯವರೆಗೂ ಹೋಟೆಲ್‌
ತೆರದಿರುತ್ತದೆ. ದಿನದಲ್ಲಿ ಬೇಡಿಕೆಯನ್ನು ಆಧರಿಸಿ ಮೈಸೂರು ಪಾಕ್‌ ಸಿದ್ದವಾಗುತ್ತದೆ, ಹೀಗಾಗಿ ಇಲ್ಲಿ ಸದಾ ಬಿಸಿ-ಬಿಸಿ ಮೈಸೂರುಪಾಕ್‌ ದೊರೆಯುತ್ತದೆ. ಗುರುವಾರ ರಜೆ ದಿನ. ಸಧ್ಯ ಕೇಜಿ ಮೈಸೂರು ಪಾಕಿನ ದರ 720 ರೂ ಇದೆ.

ಸಿಎಂ ಬಹುಪರಾಕ್‌!
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮನಗರದ ಹೋಟೆಲ್‌ ಶ್ರೀ ಜನಾರ್ಧನ
ಹೋಟೆಲಿನ ಅವರ ಮೈಸೂರು ಪಾಕ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಲ್ಲಿ ತಯಾರಾಗುವ ಮೈಸೂರು ಪಾಕ್‌ ತುಂಬಾ ರುಚಿಕರವಾಗಿರುತ್ತದೆ. ಕೆಎಂಎಫ್ನ ಮೈಸೂರುಪಾಕ್‌ ಸಹ ರುಚಿ ಕಾಯ್ದುಕೊಳ್ಳಬೇಕು, ಅಲ್ಲೇ ತರಬೇತಿ ಕೊಡಿಸಿ ಎಂದು ಸಹ ಸಲಹೆ ನೀಡಿದ್ದರು. ಮುಖ್ಯಮಂತ್ರಿಗಳಿಂದಲೇ ಹೊಗಳಿಕೆ ವ್ಯಕ್ತವಾದ ನಂತರ ಗ್ರಾಹಕರ ಸಂಖ್ಯೆ ಇನ್ನಷ್ಟು ಹೆಚ್ಚಿದೆ ಎನ್ನುತ್ತಾರೆ ಹೋಟೆಲ್‌ ಸಿಬ್ಬಂದಿ.

– ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next