ನವದೆಹಲಿ: ಉತ್ತರ ದೆಹಲಿ ಮಹಾನಗರ ಪಾಲಿಗೆ(ಎನ್ ಡಿಎಂಸಿ) ಜಹಾಂಗೀರ್ ಪುರಿಯಲ್ಲಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ವಿರೋಧಿಸಿ ಜಮೀಯತ್ ಉಲೇಮಾ ಎ ಹಿಂದ್ ಸಂಘಟನೆ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಮುಗಿಯುವವರೆಗೆ ಎರಡು ವಾರಗಳ ಕಾಲ ಕಾರ್ಯಾಚರಣೆಗೆ ತಡೆ ನೀಡಿರುವ ಆದೇಶದ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕೆಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಎಲ್ ನಾಗೇಶ್ವರ ರಾವ್ ಮತ್ತು ಜಸ್ಸೀಸ್ ಬಿಆರ್ ಗವಾಯಿ ಗುರುವಾರ(ಏ.21)ಆದೇಶ ನೀಡಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ನನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನ ಮಾಡಿದ್ದರು : ಹೆಚ್ ಡಿಕೆ
ದೆಹಲಿಯ ಜಹಾಂಗೀರ್ ಪುರಿಯಲ್ಲಿ ಏ.16ರಂದು ಹನುಮ ಜಯಂತಿ ವೇಳೆ ಹಿಂಸಾಚಾರ ನಡೆದ ಬೆನ್ನಲ್ಲೇ ಉತ್ತರ ದೆಹಲಿ ಮಹಾನಗರ ಪಾಲಿಕೆ ಜಹಾಂಗೀರ್ ಪುರಿಯಲ್ಲಿರುವ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಬುಧವಾರ ಆರಂಭಿಸಿತ್ತು. ಬುಲ್ಡೋಜರ್ ಕಾರ್ಯಾಚರಣೆಯಲ್ಲಿ ಹಲವಾರು ಮನೆಗಳು, ಅಂಗಡಿಗಳು, ವಾಣಿಜ್ಯ ಕಟ್ಟಡಗಳು ನೆಲಸಮಗೊಂಡಿದ್ದವು.
ಮಧ್ಯಾಹ್ನದ ಹೊತ್ತಿಗೆ ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಎನ್ ಡಿಎಂಸಿ ಕಾರ್ಯಾಚರಣೆಗೆ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿ, ಗುರುವಾರ ವಿಚಾರಣೆ ಮುಂದುವರಿಸುವುದಾಗಿ ಮುಖ್ಯನ್ಯಾಯಮೂರ್ತಿ ಎನ್ .ವಿ.ರಮಣ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿತ್ತು.
ಕಾರ್ಯಾಚರಣೆ ವಿರೋಧಿಸಿ ಜಮೀಯತ್ ಉಲೇಮಾ ಎ ಹಿಂದ್ ಎರಡು ಅರ್ಜಿಗಳನ್ನು ಸಲ್ಲಿಸಿದ್ದು, ಅದರಲ್ಲಿ ಕೇವಲ ಒಂದು ಸಮುದಾಯವನ್ನು ಗುರಿಯಾಗಿರಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಆರೋಪ ಸಮರ್ಪಕವಲ್ಲ ಎಂದು ಅರ್ಜಿ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ.
ತುಷಾರ್ ಅವರ ವಾದಕ್ಕೆ ಪ್ರತಿವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್ ದವೆ, ಈ ವಿಚಾರ ಸಾಂವಿಧಾನಿಕ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಶ್ನೆಯನ್ನು ಎತ್ತುತ್ತದೆ. ಇದು ಕೇವಲ ಜಹಾಂಗೀರ್ ಪುರಿಗೆ ಮಾತ್ರ ಸಂಬಂಧಿಸಿದ ಸಮಸ್ಯೆಯಲ್ಲ. ಒಂದು ವೇಳೆ ಇದಕ್ಕೆ ಅನುಮತಿ ನೀಡಿದರೆ, ಯಾವುದೇ ಕಾನೂನು ಸುವ್ಯವಸ್ಥೆಗೆ ಜಾಗವಿಲ್ಲದಂತಾಗಲಿದೆ. ಪೊಲೀಸರು ಮತ್ತು ನಾಗರಿಕ ಅಧಿಕಾರಿಗಳು ಸಂವಿಧಾನಕ್ಕೆ ಬದ್ಧರಾಗಿರಬೇಕೇ ಹೊರತು ಬಿಜೆಪಿ ಮುಖಂಡರು ಬರೆದ ಪತ್ರಕ್ಕಲ್ಲ. ಇದೊಂದು ದುರದೃಷ್ಟಕರ ಬೆಳವಣಿಗೆ ಎಂದು ವಾದಿಸಿರುವುದಾಗಿ ವರದಿ ತಿಳಿಸಿದೆ.
ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಎನ್ ಡಿಎಂಸಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮುಂದೂಡಿದೆ.