ಕಲಬುರಗಿ: ರಸ್ತೆಯಲ್ಲಿ ಜಾಗೃತಿಯಿಂದ ಪ್ರಯಾಣ ಮಾಡುವುದರಿಂದ ಮಾತ್ರವೇ ಅಪಘಾತ ತಡೆಯಲು ಸಾಧ್ಯ ಎಂದು ಈಶಾನ್ಯ ಕರ್ನಾಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಮೊಹ್ಮದ್ ಇಲಿಯಾಸ್ ಬಾಗಬಾನ್ ಹೇಳಿದರು. ಇಲ್ಲಿನ ಡಿಪೋ ನಾಲ್ಕರಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ದಿನೇ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದನ್ನು ತಡೆಯಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಯಾಣಿಕರು ಹಾಗೂ ಚಾಲಕರು ಎಚ್ಚರಿಕೆ ವಹಿಸಬೇಕು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಗರ ಸಂಚಾರ ವಿಭಾಗದ ಸಿಪಿಐ ಶಾಂತಿನಾಥ ಮಾತನಾಡಿ, ನಗರದಲ್ಲಿ ದಟ್ಟಣೆ ಹೆಚ್ಚಿದೆ.
ಆದ್ದರಿಂದ ಚಾಲಕರು ಎಚ್ಚರಿಕೆಯಿಂದ ಬಸ್ಸುಗಳನ್ನು ನಡೆಸಬೇಕು. ಪ್ರತಿ ನಿಲ್ದಾಣದಲ್ಲಿ ಸರಿಯಾದ ಸ್ಥಳದಲ್ಲಿ ನಿಲ್ಲಿಸಿ, ಸರಿಯಾಗಿ ಚಾಲನೆ ಮಾಡುವುದರಿಂದ ಅಪಘಾತ ತಪ್ಪಿಸಬಹುದು ಎಂದರು. ಪ್ರತಿಯೊಬ್ಬರು ಅವಸರದಿಂದಲೇ ವಾಹನ ಚಲಾಯಿಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಬಸ್ಸು ಚಾಲಕರು ವ್ಯವಧಾನದಿಂದ ರಸ್ತೆಯಲ್ಲಿ ವಾಹನ ಚಲಾಯಿಸಬೇಕು.
ಇದರಿಂದ ಬಹುತೇಕ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತದೆ. ಅಲ್ಲದೆ, ಅಪಘಾತವಾದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಜೊತೆಯಲ್ಲಿ ಆಸ್ಪತ್ರೆಗೆ ಗಾಯಾಳುಗಳನ್ನು ಕೊಂಡೋಯ್ಯಲು ವ್ಯವಸ್ಥೆ ಮಾಡಬೇಕು ಎಂದರು.
ಜಿಲ್ಲಾ ಆಹಾರ ಸುರಕ್ಷಾಧಿಕಾರಿ ಎಸ್.ಆರ್ .ಬಿರಾದಾರ, ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ರಿಜ್ವಾನ್ ಅಹಮದ್ ರಸ್ತೆ ಸುರಕ್ಷತೆ ಕುರಿತು ಮಾತನಾಡಿದರು. ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಧಿಕಾರಿ ಎಂ.ವಾಸು., ಡಿ.ಟಿ.ಒ ಎಸ್.ಎಂ.ಖಾದ್ರಿ, ಮಲ್ಲಿಕಾರ್ಜುನ ದೇಗಲ್ಮಡಿ, ಡಿಎಂ-4 ಲೆಕ್ಕಾಧಿಧಿಕಾರಿ, ಎನ್.ಜಿ.ಒ. ಬಷೀರ್ ಹಾಗೂ ನೂರಾರು ಸಂಸ್ಥೆಯ ಚಾಲಕ, ನಿರ್ವಾಹಕ, ಮೆಕಾನಿಕ್ ಸಿಬ್ಬಂದಿ ಹಾಜರಿದ್ದರು.