Advertisement

ದಲಿತರ ಕಣ್ಣೀರು ಒರೆಸಿದ ಶ್ರೇಷ್ಠ ವ್ಯಕ್ತಿತ್ವ ಬಾಬೂಜಿಯವರದ್ದು: ವಸಂತರಾಜು

05:50 PM Apr 05, 2022 | Team Udayavani |

ಕೊರಟಗೆರೆ: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಅವರು ಬಡವರ, ದೀನ ದಲಿತರ ಕಣ್ಣೀರು ಒರೆಸಿದ ಶ್ರೇಷ್ಠ ವ್ಯಕ್ತಿತ್ವದವರಾಗಿದ್ದರು ಎಂದು ವಡ್ಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತರಾಜು ತಿಳಿಸಿದರು.

Advertisement

ತಾಲ್ಲೂಕಿನ  ವಡ್ಡಗೆರೆ ಗ್ರಾಪಂ ಕಾರ್ಯಾಲಯದಲ್ಲಿ ಮಂಗಳವಾರ ಬಾಬು ಜಗಜೀವನರಾಮ್ ಅವರ 115 ನೇ ಜನ್ಮ ದಿನಾಚರಣೆಯ ಪ್ರಯಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಬು ಜಗಜೀವನ ರಾಮ್ ಅವರು ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಹಾಗೂ ದಕ್ಷ ಆಡಳಿತಗಾರರಾಗಿದ್ದರು. ಹಸಿರು ಕ್ರಾಂತಿಯ ಹರಿಕಾರರಾಗಿ ಜನಸಾಮಾನ್ಯರು ಎಂದಿಗೂ ಮರೆಯದ ವ್ಯಕ್ತಿತ್ವವನ್ನು ಹೊಂದಿದ್ದರು. ದೇಶದಲ್ಲಿ ತಲೆದೋರಿದ ಆಹಾರ ಸಮಸ್ಯೆ ಹೋಗಲಾಡಿಸಿ, ಹಸಿರು ಕ್ರಾಂತಿಗೆ ಕಾರಣರಾದರು. ಅಂತಹ ಮಹಾನ್ ನಾಯಕರ ಆದರ್ಶಗಳನ್ನು ಹಾಗೂ ಚಿಂತನೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶ್ವತ್ಥಪ್ಪ ಮಾತನಾಡಿ, ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ, ತ್ಯಾಗದಿಂದ ಸಂಪಾದಿಸಬಹುದು ಎನ್ನುವ ಸಂದೇಶ ಸಾರಿದ ಹೆಗ್ಗಳಿಕೆ ಡಾ.ಬಾಬು ಜಗಜೀವನರಾಂ ಅವರಿಗೆ ಸಲ್ಲುತ್ತದೆ.ಸಮಾಜ ಸುಧಾರಣೆ ಹಾಗೂ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದರು. ಕಾರ್ಮಿಕರ ಏಳಿಗೆಯನ್ನು ಸದಾ ಬಯಸುತ್ತಿದ್ದರು. ದೇಶದ ಜನರು ಅಹಾರ ಕೊರತೆ ಅನುಭವಿಸುತ್ತಿರುವುದನ್ನು ಕಂಡು ಹಸಿರು ಕ್ರಾಂತಿ ಪ್ರಾರಂಭಿಸಿ ನೆರವಾದರು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಿ.ವಿ.ವೀರೇಂದ್ರ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಅವರು ಶೋಷಿತರ ಹಕ್ಕಿಗಾಗಿ ಹೋರಾಡಿದವರು, ಹಸಿರು ಕ್ರಾಂತಿಯ ಹರಿಕಾರ. ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಕೃಷಿ, ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು, ಅವರ ಸೇವೆ ಸ್ಮರಣೀಯವಾದುದು. ಅವರ ಜೀವನ ಚರಿತ್ರೆ ಯುವ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದರು.

ಬಾಬೂಜಿ ಎಂದೇ ಖ್ಯಾತರಾಗಿದ್ದ ಜಗಜೀವನ್ ರಾಮ್ ಅವರು, ಶೋಷಿತರ, ದಮನಿತರ ಪರವಾಗಿ ಅವರ ಹಕ್ಕಿಗಾಗಿ ಮಾಡಿದ ಹೋರಾಟ ಹಾಗೂ ಈ ದೇಶಕ್ಕೆ ಅವರು ನೀಡಿರುವ ಅನುಪಮ ಸೇವೆಯನ್ನು ನಾವು ಸದಾ ಸ್ಮರಿಸಬೇಕಾಗಿದೆ ಎಂದರು.

Advertisement

ಇಂತಹ ಮಹಾನ್ ನಾಯಕರ ಆದರ್ಶಗಳನ್ನು ಯುವ ಪೀಳಿಗೆ ಅಳವಡಿಸಿಕೊಂಡಾಗ ದೇಶದ ಉನ್ನತಿಗೆ ಕಾರಣವಾಗಲಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಡ್ಡಗೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ದೀಪಿಕಾ ರಾಣಿ, ಬುರುಗನಹಳ್ಳಿ ರವಿ, ಗೌರಿಶಂಕರ್, ವೀರಕ್ಯಾತರಾಯ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿವರ್ಗ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next