ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ನಿರ್ದೇಶನದ “ಜಗ್ಗಿ ಜಗನ್ನಾಥ್’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಲಿಖೀತ್ ರಾಜ್ ಎಂಬ ಹೊಸ ಪ್ರತಿಭೆಯೊಂದನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ಕೊಡಲೆಂದೇ ಸಾಯಿಪ್ರಕಾಶ್ ಮತ್ತು ತಂಡ ಮಾಧ್ಯಮ ಮುಂದೆ ಬಂದಿತ್ತು. ಸಿನಿಮಾ ಕುರಿತು ಮಾತಿಗಿಳಿದ ಸಾಯಿಪ್ರಕಾಶ್, “ಚಿತ್ರದಲ್ಲಿ ಭಿನ್ನ ಪ್ರೇಮಕಥೆ ಹಾಗೂ ಆ್ಯಕ್ಷನ್ ಜೊತೆಗೆ ಅಂಡರ್‌ವರ್ಲ್ಡ್ ಅಂಶಗಳನ್ನು ಸೇರಿಸಲಾಗಿದೆ. ಪೇಪರ್ ಆಯುವ ಸಾಮಾನ್ಯ ಯುವಕನೊಬ್ಬ ಅಘೋರಿಯಾದ ನೈಜ ಘಟನೆ “ಜಗ್ಗಿ ಜಗನ್ನಾಥ್’ ಚಿತ್ರದ ವಿಶೇಷ. ಸಾಕಷ್ಟು ಮನರಂಜನೆ ವಿಷಯಗಳೂ ಇಲ್ಲಿವೆ. ಮಾಸ್ ಜೊತೆಗೆ ಸಂದೇಶವೂ ಇಲ್ಲಿದೆ’ ಎಂಬುದು ಅವರ ಮಾತು.
ಈ ಚಿತ್ರದ ಮೂಲಕ ಬಹು ದಿನಗಳ ನಂತರ ದುನಿಯಾ ರಶ್ಮಿ ನಾಯಕಿಯಾಗಿ ತೆರೆಯ ಮೇಲೆ ಬರುತ್ತಿದ್ದಾರೆ. “ನಾನು ಮುಸ್ಲಿಂ ಪಾತ್ರ ನಿರ್ವಹಿಸಿದ್ದು, ಇದೇ ಮೊದಲ ಬಾರಿಗೆ ಈ ರೀತಿಯ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ಕಥಾವಸ್ತು ಚೆನ್ನಾಗಿದೆ. ಈಗಿನ ಯೂಥ್‌ಗೆ ಬೇಕಾದ ವಿಷಯಗಳು ಇಲ್ಲಿವೆ. ಇನ್ನು, ಜೈಪುರದಲ್ಲಿ ನಡೆದ ಚಿತ್ರೀಕರಣದಲ್ಲಿ ಸಾಕಷ್ಟು ಅನುಭವ ಆಯ್ತು. ಇನ್ನು, ಸಾಯಿಪ್ರಕಾಶ್ ಅವರ ಜೊತೆ ಕೆಲಸ ಮಾಡಿದ್ದು ಮರೆಯದ ಅನುಭವ. ಅವರಿಂದ ನಾನು ಸಾಕಷ್ಟು ಕಲಿತುಕೊಳ್ಳಲು ಸಾಧ್ಯವಾಯ್ತು’ ಎಂದರು ರಶ್ಮಿ.
ಈ ಚಿತ್ರಕ್ಕೆ ಲಿಖೀತ್‌ರಾಜ್ ಹೀರೋ. ಅವರಿಗೆ ಒಳ್ಳೆಯ ಸಿನಿಮಾ ಮಾಡಿರುವ ಖುಷಿ. “ಈಗಷ್ಟೇ ನಾನು ಅಂಬೆಗಾಲು ಇಡುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಇರಲಿ. ಪೇಪರ್ ಆಯುವ ಪಾತ್ರ ವಿಶೇಷವಾಗಿದೆ. ಸಾಕಷ್ಟು ತಿರುವುಗಳಿವೆ. ಆ್ಯಕ್ಷನ್ ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್. ಸಾಯಿಕುಮಾರ್ ಅವರ ಜೊತೆ ನಟಿಸಿದ್ದು ನನ್ನ ಅದೃಷ್ಟ. ಅವರನ್ನು ನೋಡಿದಾಗ, ರಿಯಲ್ ಪೊಲೀಸ್ ಅಧಿಕಾರಿಯನ್ನೇ ನೋಡಿದ ಅನುಭವ ಆಯ್ತು. ಸಾಕಷ್ಟು ವಿಷಯಗಳನ್ನು ನಾನು ಅವರಿಂದ ಕಲಿತಿದ್ದೇನೆ’ ಎನ್ನುತ್ತಾರೆ ಅವರು.
ಎ.ಎಂ.ನೀಲ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. “ಹಿರಿಯ ನಿರ್ದೇಶಕರ ಜೊತೆ ಕೆಲಸ ಮಾಡಿದ್ದು ಸಂತಸವಾಗಿದೆ. ಹಿನ್ನೆಲೆ ಸಂಗೀತ ಚೆನ್ನಾಗಿ ಬರಬೇಕು ಎಂಬ ಕಾರಣಕ್ಕೆ ನಾನೇ ಸ್ವಲ್ಪ ಸಮಯ ತೆಗೆದುಕೊಂಡೆ. ಅದು ಲೇಟ್ ಆಗಿದೆ. ಇನ್ನು, ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರಿಂದ ಚೆನ್ನಾಗಿ ಹಾಡು ಮಾಡಲು ಸಾಧ್ಯವಾಗಿದೆ. ಗುಣಮಟ್ಟದ ಹಾಡುಗಳು ಕೊಟ್ಟ ತೃಪ್ತಿ ನನ್ನದು. ಹೊಸ ಗಾಯಕಿ ಸ್ನೇಹ ಅವರಿಂದ ಹಾಡಿಸಲು ಅವಕಾಶ ಕೊಟ್ಟಿದ್ದಾರೆ. ತಂಡದ ಎಫರ್ಟ್‌ನಿಂದ ಒಳ್ಳೆಯ ಚಿತ್ರ ಮಾಡಿದ ಖುಷಿ ಇದೆ’ ಎಂದರು ನೀಲ್.
ಚಿತ್ರಕ್ಕೆ ರೇಣು ಛಾಯಾಗ್ರಹಣವಿದೆ. ಜಯರಾಜು, ಜಿ.ಶಾರದ, ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ತಬಲಾ ನಾಣಿ, ಪದ್ಮಜಾ ರಾವ್, ಲಯ ಕೋಕಿಲ, ಮೈಕೋ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ.