ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ಚಿತ್ರದ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ಚಿತ್ರದ ಮೊದಲ ಭಾಗದ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ತೋತಾಪುರಿ ಸೀಕ್ವೆಲ್ 2ರ ಚಿತ್ರೀಕರಣವನ್ನು ಏಕಕಾಲದಲ್ಲಿ ನಡೆಸುತ್ತಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಯಾರೂ ಮಾಡದ ಹೊಸ ದಾಖಲೆಯನ್ನು ತೋತಾಪುರಿ ಚಿತ್ರ ಸೃಷ್ಟಿಸಿದೆ.
ಮಾರ್ಚ್ 17 ನವರಸ ನಾಯಕ ಜಗ್ಗೇಶ್ ಹುಟ್ಟುಹಬ್ಬವಿದ್ದು, ತೋತಾಪುರಿ ಚಿತ್ರತಂಡ ತಮ್ಮ ಪ್ರೀತಿಯ ನಾಯಕನಿಗೆ ಹುಟ್ಟುಹಬ್ಬದ ಶುಭಾಷಯ ಕೋರಿದ್ದು, ಈ ವೇಳೆ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಂಡಿರುವ ನಿರ್ಮಾಪಕ ಸುರೇಶ್ ತೋತಾಪುರಿ ಚಿತ್ರ ಮಾಡಿರುವ ನೂತನ ದಾಖಲೆ ಬಗ್ಗೆಯೂ ತಿಳಿಸಿದ್ದಾರೆ.
ಈಗಾಗಲೇ ‘ತೋತಾಪುರಿ’ ಭಾಗ 1ರ ಚಿತ್ರೀಕರಣ ಕಂಪ್ಲೀಟ್ ಮಾಡಿರೋ ಟೀಂ ತೋತಾಪುರಿ ಎರಡನೇ ಭಾಗದ ಚಿತ್ರೀಕರಣವನ್ನು ಭರದಿಂದ ನಡೆಸುತ್ತಿದೆ. ಈ ರೀತಿ ಬಿಡುಗಡೆಗೂ ಮುನ್ನವೇ ಇಲ್ಲಿವರೆಗೂ ಯಾವ ಚಿತ್ರರಂಗದಲ್ಲೂ ಎರಡೂ ಸೀಕ್ವೆಲ್ಗಳ ಚಿತ್ರೀಕರಣ ನಡೆಸಿಲ್ಲ.
‘ತೋತಾಪುರಿ’ ಚಿತ್ರದಲ್ಲೇ ಮೊದಲು ನಡೆಯುತ್ತಿರುವ ಪ್ರಯೋಗವಾಗಿದ್ದು, ಈ ಮೂಲಕ ತೋತಾಪುರಿ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಬಿಡುಗಡೆಗೂ ಮುನ್ನ ನೂತನ ದಾಖಲೆಯನ್ನು ಬರೆದಿದೆ.
ನೀರ್ದೋಸೆ ಖ್ಯಾತಿಯ ವಿಜಯ ಪ್ರಸಾದ್ ನಿರ್ದೇಶನದ ಈ ಚಿತ್ರಕ್ಕೆ ಶಿವಲಿಂಗ ಖ್ಯಾತಿಯ ನಿರ್ಮಾಪಕ ಸುರೇಶ್ ಬಂಡವಾಳ ಹೂಡಿದ್ದಾರೆ. ಅಧಿತಿ ಪ್ರಭುದೇವ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಡಾಲಿ ಧನಂಜಯ್, ವೀಣಾ, ಸುಮನ ರಂಗನಾಥ್ ಸೇರಿದಂತೆ ದೊಡ್ಡ ಕಲಾವಿದರ ದಂಡು ತೋತಾಪುರಿ ಚಿತ್ರದಲ್ಲಿದೆ.