ನಟರು ತಮ್ಮ ಸಿನಿಮಾಗಳಿಗೆ ಅಥವಾ ಬೇರೆಯವರ ಸಿನಿಮಾಗಳಿಗೆ ಹಾಡುವುದು, ಹಿನ್ನೆಲೆ ಧ್ವನಿ ಕೊಡೋದು ಹೊಸದಲ್ಲ. ಆದರೆ, ಸಾಹಿತ್ಯ ಬರೆಯುವ ನಟರು ಸದ್ಯ ಕಡಿಮೆ ಎಂದರೆ ತಪ್ಪಲ್ಲ. ಆದರೆ, ಜಗ್ಗೇಶ್ ಈಗ ಸಿನಿಮಾವೊಂದಕ್ಕೆ ಹಾಡು ಬರೆದಿದ್ದಾರೆ. ಅದು “8ಎಂಎಂ’ ಚಿತ್ರಕ್ಕೆ.
ಹೌದು, ಜಗ್ಗೇಶ್ ಅವರು “8ಎಂಎಂ’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗಾಗಲೇ ಮುಹೂರ್ತವಾದ ಚಿತ್ರ, ಬಹುತೇಕ ಚಿತ್ರೀಕರಣ ಕೂಡಾ ಮುಗಿಸಿದೆ. ಈಗ ಚಿತ್ರಕ್ಕೆ ಸಾಹಿತ್ಯವೊಂದನ್ನು ಜಗ್ಗೇಶ್ ಬರೆದಿದ್ದಾರೆ. ಅದು ಕ್ಲೈಮ್ಯಾಕ್ಸ್ ಸಾಂಗ್ ಎಂಬುದು ವಿಶೇಷ. “ಬದುಕು ಒಂದು ಯುದ್ಧ ಭೂಮಿ ಕದನ ಮಾಡಿ ಗೆಲ್ಲು…ಸೋಲು ಗೆಲುವು, ಸಾವು-ನೋವು ಲೆಕ್ಕ ಬಿಟ್ಟು ನಿಲ್ಲು …’ ಎಂದು ಈ ಹಾಡು ಆರಂಭವಾಗುತ್ತದೆ.
ಈ ವಿಷಯವನ್ನು ಜಗ್ಗೇಶ್ ಟ್ವೀಟರ್ ಮೂಲಕ ಹಂಚಿಕೊಂಡಿದ್ದಾರೆ ಕೂಡಾ. “8 ಎಂಎಂ ಚಿತ್ರದ ಕ್ಲೈಮ್ಯಾಕ್ಸ್ ಹಾಡಿಗೆ ನನ್ನ ಸಾಹಿತ್ಯ. ಇಷ್ಟು ದಿನ ಪರರಿಗಾಗಿ ಎಲ್ಲಾ ಮಾಡಿ ಎಲೆ ಮರೆಕಾಯಿಯಂತೆ ಬಾಳುತ್ತಿದ್ದೆ. ಇನ್ನು ಮುಂದೆ ನನ್ನ ಶ್ರಮ ನನ್ನ ಫಲವಾಗಲಿ’ ಎಂದು ಟ್ವೀಟ್ ಮಾಡುವ ಮೂಲಕ ಮುಂದಿನ ದಿನಗಳಲ್ಲೂ ತಮಗೆ ಇಷ್ಟವಾದ ಸನ್ನಿವೇಶಗಳಿಗೆ ಸಾಹಿತ್ಯ ಬರೆಯುವ ಸುಳಿವನ್ನು ಜಗ್ಗೇಶ್ ನೀಡಿದ್ದಾರೆ.
“8 ಎಂಎಂ’ ಚಿತ್ರದಲ್ಲಿ ಜಗ್ಗೇಶ್ ಅವರ ಗೆಟಪ್ ಕೂಡಾ ವಿಭಿನ್ನವಾಗಿದೆ. ಇದು ಒಬ್ಬ ಕ್ರಿಮಿನಲ್ ಮತ್ತು ಪೊಲೀಸ್ ನಡುವಿನ ಮೈಂಡ್ ಗೇಮ್ ಕುರಿತ ಚಿತ್ರ. ಈ ಕಥೆಯನ್ನು ಜಗ್ಗೇಶ್ ಅವರ ವಯಸ್ಸಿನಲ್ಲೇ ತೋರಿಸುತ್ತಿದ್ದಾರಂತೆ. ನೆಗೆಟಿವ್ ಪಾತ್ರವಾದರೂ ಅಂತಾರಾದ್ಮದಲ್ಲಿ ಮಾನವೀಯ ಮೌಲ್ಯವಿರುವಂತಹ ಪಾತ್ರವಾದ್ದರಿಂದ ಜಗ್ಗೇಶ್ ಖುಷಿಯಿಂದ ಒಪ್ಪಿದರಂತೆ.
ಈ ಚಿತ್ರದ ಮೂಲಕ ಅವರಿಗೆ ಚೇಂಜ್ ಓವರ್ ಕೂಡಾ ಸಿಕ್ಕಿದೆಯಂತೆ. ಚಿತ್ರವನ್ನು ಹರಿಕೃಷ್ಣ ಎನ್ನುವವರು ನಿರ್ದೇಶಿಸುತ್ತಿದ್ದು, ನಾರಾಯಣ ಸ್ವಾಮಿ ಇನ್ಫೆಂಟ್ ಪ್ರದೀಪ್, ಸಲೀಮ್ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದೆ.