ನವರಸನಾಯಕ ಜಗ್ಗೇಶ್ “ಹೊಂಬಾಳೆ ಫಿಲಂಸ್’ ಬ್ಯಾನರ್ನ ಹೊಸ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿದ್ದು, ಇದೀಗ ಈ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ. ಜಗ್ಗೇಶ್ ನಾಯಕನಾಗಿರುವ “ಹೊಂಬಾಳೆ ಫಿಲಂಸ್’ ನಿರ್ಮಿಸುತ್ತಿರುವ ಹೊಸಚಿತ್ರಕ್ಕೆ “ರಾಘವೇಂದ್ರ ಸ್ಟೋರ್’ ಎಂದು ಟೈಟಲ್ ಇಡಲಾಗಿದ್ದು, ಚಿತ್ರದ ಟೈಟಲ್ಗೆ “ಸಿನ್ಸ್ 1972′ ಎಂಬ ಟ್ಯಾಗ್ ಲೈನ್ ಇದೆ.
“ಹೊಂಬಾಳೆ ಫಿಲಂಸ್’ ನಿರ್ಮಿಸುತ್ತಿರುವ 12ನೇ ಚಿತ್ರ ಇದಾಗಿದ್ದು, ಸಂತೋಷ್ ಆನಂದರಾಮ್ ಈ ಚಿತ್ರದ ನಿರ್ದೇಶಿಸುತ್ತಿದ್ದು, ಬುಧವಾರ ಈ ಚಿತ್ರದ ಟೈಟಲ್ ಅನೌನ್ಸ್ ಆಗಿದೆ.
ಈ ಕುರಿತು “ಹೊಂಬಾಳೆ ಫಿಲಂಸ್’ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಅನ್ನದಾತೋ ಸುಖೀಭವ, ನಮ್ಮ ಮುಂದಿನ ಚಿತ್ರ ನವರಸ ನಾಯಕ ಜಗ್ಗೇಶ್ ಅವರರೊಂದಿಗೆ ಶುರುವಾಗಲಿದ್ದು, ಸಂತೋಷ್ ಆನಂದ್ ರಾಮ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇದೇ ನವೆಂಬರ್ 22 ರಿಂದ ಈ ಚಿತ್ರದ ಚಿತ್ರೀಕರಣ ಅರಂಭವಾಗಲಿದೆ’ ಎಂದಿದೆ.
ಇನ್ನು ಬಿಡುಗಡೆಯಾಗಿರುವ “ರಾಘವೇಂದ್ರ ಸ್ಟೋರ್’ ಸಿನಿಮಾದ ಟೈಟಲ್ ಪೋಸ್ಟರ್ನಲ್ಲಿ ಬಿಳಿ ಬಣ್ಣದ ಬನಿಯನ್ ತೊಟ್ಟಿರುವ ಜಗ್ಗೇಶ್ ಒಂಬತ್ತು ವಿವಿಧ ಹಾವಭಾವದಲ್ಲಿ ಕಾಣಿಸಿ ಕೊಂಡಿದ್ದಾರೆ. ಆಹಾರ ಅಭಿರುಚಿಯ ಬಗ್ಗೆ ಚಿತ್ರದ ಪೋಸ್ಟರ್ನಲ್ಲಿ ಒಂದಷ್ಟು ಅಂಶಗಳನ್ನು ಹೇಳುತ್ತಿರುವಂತಿದೆ. ಈ ಹೊಸ ಚಿತ್ರದ ಬಗ್ಗೆ ನಟ ಜಗ್ಗೇಶ್ ಸಹ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿದ್ದು, “ನಗಬೇಕು ನಗಿಸಬೇಕು ಇದೆ ನನ್ನ ಧರ್ಮ… ಫುಲ್ ಮೀಲ್ಸ್ ಹಬ್ಬದೂಟ’ ಎಂದಿದ್ದಾರೆ.
ಸದ್ಯ “ರಾಘವೇಂದ್ರ ಸ್ಟೋರ್’ ಟೈಟಲ್ ಮತ್ತು ಚಿತ್ರೀಕರಣ ಶುರುವಾಗುವ ಮಾಹಿತಿಯನ್ನು ಮಾತ್ರ ನಿರ್ಮಾಣ ಸಂಸ್ಥೆ ಹಂಚಿಕೊಂಡಿದೆ.