Advertisement
ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಶೆಟ್ಟರ್ ಆಪರೇಷನ್ ಹಸ್ತಕ್ಕೆ ಹೊರಟಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಕಾರ್ಯಾಚರಣೆ ನಡೆಸುವಂತೆ ಶೆಟ್ಟರ್‌ಗೆ ಸೂಚಿಸಲಾಗಿದೆ. ಶೆಟ್ಟರ್ ಮೂಲಕ ಲೋಕಸಭಾ ಚುನಾವಣಾ ಸಂದರ್ಭದಲ್ಲಾದರೂ ಕೆಲವು ಶಾಸಕರು, ಲಿಂಗಾಯತ ಮುಖಂಡರನ್ನು ಸೆಳೆಯಬಹುದು ಎಂಬ ನಿರೀಕ್ಷೆ ಕಾಂಗ್ರೆಸ್‌ನದು.
Related Articles
ಜಗದೀಶ್ ಶೆಟ್ಟರ್ ಅವರನ್ನು ಪಕ್ಷದ ಸಂಘಟನ ವ್ಯವಸ್ಥೆ ಹಾಗೂ ಸರಕಾರದ ವಿದ್ಯಮಾನದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಪೂರ್ಣ ಪ್ರಮಾಣದಲ್ಲಿ ಒಪ್ಪಿಗೆ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಶೆಟ್ಟರ್ ಪಕ್ಷ ಸೇರ್ಪಡೆ ತರಾತುರಿಯಲ್ಲಿ ಆದ ಕಾರಣ ಪಕ್ಷದಲ್ಲಿ ಅವರ ಪಾತ್ರ ಇನ್ನೂ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಸಿದ್ದರಾಮಯ್ಯ ಜತೆಗೆ ಕಾಂಗ್ರೆಸ್‌ನ ಹಲವು ಲಿಂಗಾಯತ ಮುಖಂಡರೂ ಶೆಟ್ಟರ್ ವಿಚಾರದಲ್ಲಿ ಅರೆಮನಸ್ಸು ಹೊಂದಿರುವುದರಿಂದ ಶೆಟ್ಟರ್ ಕಾಂಗ್ರೆಸ್‌ನಲ್ಲಿದ್ದರೂ ಸದಾ ಬಿಜೆಪಿ ನಾಯಕತ್ವದ ಬಗ್ಗೆ ಮಾತನಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಡಿ.ಕೆ. ಶಿವಕುಮಾರ್ ಅವರು ಶೆಟ್ಟರ್‌ಗೆ ಹೊಸ ಜವಾಬ್ದಾರಿ ನೀಡಿದ್ದಾರೆ. ಶೆಟ್ಟರ್ ಮೂಲಕ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಸೆಳೆದು ಸಂಘಟನಾತ್ಮಕವಾಗಿ ಹೊಡೆತ ಕೊಡಬಹುದೆಂಬುದು ಶಿವಕುಮಾರ್ ಲೆಕ್ಕಾಚಾರ.
Advertisement
ಕಾಡುತ್ತಿರುವ “ಟೇಕಾಫ್’ ಟೀಕೆ ಶೆಟ್ಟರ್ ಈ ಹಿಂದೆ ವಿಪಕ್ಷ ನಾಯಕರಾಗಿದ್ದ ಅವಧಿಯುದ್ದಕ್ಕೂ “ಸಿದ್ದರಾಮಯ್ಯ ಸರಕಾರ ಟೇಕಾಫ್ ಆಗಿಲ್ಲ’ ಎಂದು ಆರೋಪಿಸುತ್ತಿದ್ದರು. ಇದು ಸಿದ್ದರಾಮಯ್ಯನವರಿಗೆ ಕಿರಿಕಿರಿ ಉಂಟು ಮಾಡಿತ್ತು. ಜತೆಗೆ ಅರ್ಕಾವತಿ ರೀಡು ಪ್ರಕರಣವನ್ನು ಶೆಟ್ಟರ್ ಸದನದಲ್ಲಿ ಪ್ರಸ್ತಾವಿಸಿದ್ದು ಸಿದ್ದರಾಮಯ್ಯ ಅವರ ಪಾಲಿಗೆ ಮಾಸದ ಗಾಯವಾಗಿಯೇ ಉಳಿದಿದೆ. ಹೀಗಾಗಿ ಶೆಟ್ಟರ್ ಜತೆ ಅವರು ಪ್ರಜ್ಞಾಪೂರ್ವಕ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ತಮ್ಮ ಜತೆಗೊಬ್ಬ ಪ್ರಬಲ ಲಿಂಗಾಯತ ನಾಯಕ ಇದ್ದಾರೆ ಎಂಬ ಸಂದೇಶ ಸಾರುವುದಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ಶೆಟ್ಟರ್ ಅವರಿಗೆ ಆದ್ಯತೆ ಕಲ್ಪಿಸುತ್ತಿದ್ದಾರೆ ಎಂಬುದು ಕಾಂಗ್ರೆಸಿಗರ ಅಂಬೋಣ. ಮೌನವಾದ ಸುಕುಮಾರ್ ಶೆಟ್ಟಿ ?
ಈ ಮಧ್ಯೆ ಬೈಂದೂರಿನ ಮಾಜಿ ಶಾಸಕ ಸುಕುಮಾರ್ ಶೆಟ್ಟಿಯವರು ಕಾಂಗ್ರೆಸ್ ವಲಸೆಗೆ ತಾತ್ಕಾಲಿಕ ವಿರಾಮ ಹಾಕಿದ್ದಾರೆ ಎನ್ನಲಾಗುತ್ತಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡದ ಬಿಜೆಪಿ ನಿಯೋಗ ಇತ್ತೀಚೆಗೆ ಸುಕುಮಾರ್ ಶೆಟ್ಟಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಅವರು ತಟಸ್ಥವಾಗಿ ಉಳಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಬಿಜೆಪಿಯ ಉನ್ನತ ನಾಯಕರೊಬ್ಬರ ಅನಗತ್ಯ ಅನುಮಾನದಿಂದ ತಾನು ಟಿಕೆಟ್ ಕಳೆದುಕೊಂಡೆ ಎಂದು ನಿಯೋಗದ ಬಳಿ ಶೆಟ್ಟರು ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಸೇರುವ ಬಗ್ಗೆ ತರಾತುರಿಯ ನಿರ್ಧಾರ ಕೈಗೊಳ್ಳುವುದಿಲ್ಲ ಎಂದಿದ್ದಾರೆ ಎಂದು ತಿಳಿದು ಬಂದಿದೆ. -ರಾಘವೇಂದ್ರ ಭಟ್