Advertisement

ಅಂಗವಿಕಲರಿಗೆ ಮಾರ್ಗದರ್ಶಕರಾಗಿರುವ ಜಗದೀಶ ಭಟ್‌

01:51 AM Jan 23, 2020 | Sriram |

ಸಾವಿರಾರು ಮಂದಿ ಅಂಗವಿಕಲರಿಗೆಗೆ ಚಾಲನೆ ಪರವಾನಿಗೆ ಪಡೆಯಲು ನೆರವಾಗುವುದರೊಂದಿಗೆ ಅವರನ್ನು ಮುಖ್ಯವಾಹಿನಿಯಲ್ಲಿ ಗುರುತಿಸುವಂತೆ ಮಾಡುವ ಕಾರ್ಯ.

Advertisement

ಉಡುಪಿ: ಸಾಮಾನ್ಯರು ವಾಹನ ಚಾಲನೆ ಕಲಿಯುವುದು, ಪರವಾನಿಗೆ ಪಡೆಯುವುದಕ್ಕೆ ಹೆಚ್ಚು ಕಷ್ಟವೇನಿಲ್ಲ. ಆದರೆ ಅಂಗವಿಕಲರಿಗೆ ಎರಡೂ ಕಷ್ಟವೇ. ಇಂತಹವರಿಗಾಗಿಯೇ ನೆರವಾದವರು ಅಂಬಲಪಾಡಿಯ ಜಗದೀಶ ಭಟ್‌. ಕಳೆದ 6-7 ವರ್ಷಗಳಿಂದ ನೂರಾರು ಮಂದಿ ಅಂಗವಿಕಲರಿಗೆ ಉಚಿತ ದ್ವಿಚಕ್ರ ವಾಹನ ತರಬೇತಿ ನೀಡಿ ಇವರು ನೆರವಿನ ಹಸ್ತ ಚಾಚಿದ್ದಾರೆ.

ಸ್ವಾವಲಂಬನೆಯ ಕನಸು
ಉದ್ಯಾವರದ ಐಟಿಐ ಕಾಲೇಜಿನಲ್ಲಿ ಉದ್ಯೋಗ ದಲ್ಲಿರುವ ಜಗದೀಶ್‌ ಭಟ್‌ ಹುಟ್ಟುವಾಗ ಎಲ್ಲರಂತೆ ಸಾಮಾನ್ಯರಾಗಿದ್ದರು. 6ನೇ ವಯಸ್ಸಿಗೆ ಪೋಲಿಯೋ ಕಾಯಿಲೆಗೆ ತುತ್ತಾದ ಪರಿಣಾಮ ಒಂದು ಕಾಲು ಸ್ವಾಧೀನ ಕಳೆದುಕೊಂಡರು. ಆದರೂ ಧೃತಿಗೆಡದ ಅವರು ಕಷ್ಟಪಟ್ಟು ಪದವಿ ಶಿಕ್ಷಣ ಪೂರೈಸಿದರು. ಸ್ವಾವಲಂಬಿ ಜೀವನ ಸಾಗಿಸಬೇಕೆಂದು ದ್ವಿಚಕ್ರ ವಾಹನ ಚಾಲನೆ ತರಬೇತಿಯನ್ನೂ ಪಡೆದರು.

ನೆರವಿನ ಹಸ್ತ
ದೈಹಿಕವಾಗಿ ಸೂಕ್ಷ್ಮವಾಗಿರುವ ಅಂಗವಿಕಲರಿಗೆ ವಾಹನ ತರಬೇತಿ ನೀಡಲು ಸಾಮಾನ್ಯವಾಗಿ ಯಾರೂ ಧೈರ್ಯ ಮಾಡುವುದಿಲ್ಲ. ಇದರಿಂದ ಸಾಕಷ್ಟು ಜನರು ವಾಹನ ತರಬೇತಿ ಪಡೆಯಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸ್ವತಃ ತರಬೇತಿ ನೀಡಲು ಅವರು ಪ್ರಾರಂಭಿಸಿದರು.

ಮುಖ್ಯವಾಹಿನಿಗೆ
ಕಳೆದ 6-7 ವರ್ಷಗಳಿಂದ ಸಾವಿರಕ್ಕೂ ಅಧಿಕ ಮಂದಿ ಅಂಗವಿಕಲರಿಗೆ ಡ್ರೈವಿಂಗ್‌ ಕಲಿಸಿ ಪರವಾನಿಗೆ ಮಾಡಿಸಿಕೊಟ್ಟ ಹೆಗ್ಗಳಿಕೆ ಅವರದ್ದು. ಈ ಮೂಲಕ ಅವರೂ ಮುಖ್ಯವಾಹಿನಿಯಲ್ಲಿ ಗುರುತಿಸ ಬೇಕೆಂಬ ಇಚ್ಛೆ ವ್ಯಕ್ತಪಡಿಸುತ್ತಾರೆ ಜಗದೀಶ ಅವರು.

Advertisement

ಪ್ರತಿಭೆ ಗುರುತಿಸುವ ಕೆಲಸ
ಅಂಗವಿಕಲರೂ ಎಲ್ಲರಂತೆ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ವಾಹನ ಕಲಿಕೆ ಹಾಗೂ ಯಕ್ಷಗಾನ ಚಟುವಟಿಕೆಗಳ ಮೂಲಕ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ. ಈಗಾಗಲೆ ಹಲವಾರು ಮಂದಿ ತರಬೇತಿ ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ ಅಂಗವಿಕಲರಿಗೆ ಸಂಬಂಧಪಟ್ಟ ಇನ್ನಿತರ ಮಾಹಿತಿಗಳನ್ನೂ ನೀಡುತ್ತಿದ್ದೇನೆ.
– ಜಗದೀಶ ಭಟ್‌

ಹಲವು ಆಸಕ್ತಿ
ಅಂಗವಿಕಲರಿಗೆ ಚಾಲನೆ ಪರವಾನಿಗೆ ಮಾಡಿಸಿಕೊಡುವುದು ಮಾತ್ರವಲ್ಲ, ಯಕ್ಷಗಾನ, ಹುಲಿವೇಷದಲ್ಲೂ ಇವರ ಆಸಕ್ತಿ ಅಪಾರ. ಇದರೊಂದಿಗೆ ಅಂಗವಿಕಲರಿಗೆ ಕಾನೂನು ಮಾಹಿತಿ, ಸವಲತ್ತು ಮಾಹಿತಿ ನೀಡುತ್ತಾರೆ.ಯಕ್ಷಗಾನ ತಂಡ ಕಟ್ಟಿಕೊಂಡು ವಿವಿಧೆಡೆಗಳಲ್ಲಿ ಈಗಾಗಲೇ ಪ್ರದರ್ಶನಗಳನ್ನೂ ನೀಡಿದ್ದಾರೆ. ಪ್ರತಿವರ್ಷ ಕೃಷ್ಣಾಷ್ಟಮಿ ಸಂದರ್ಭ ಹುಲಿವೇಷವನ್ನೂ ಹಾಕುತ್ತಾರೆ.

ಜಗದೀಶ ಅವರು ಚಿಕ್ಕ ವಯಸ್ಸಿಗೆ ಪೋಲಿಯೋ ಕಾಯಿಲೆಗೆ ತುತ್ತಾಗಿ ಕಾಲು ಸ್ವಾಧೀನ ಕಳೆದುಕೊಂಡಿದ್ದರೂ ಸ್ವಾವಲಂಬಿ ಜೀವನ ನಡೆಸುತ್ತಾ, ಅನೇಕ ಅಂಗವಿಕಲರಿಗೆ ಸ್ಫೂರ್ತಿ ತುಂಬಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next