Advertisement

ಜಗನ್ಮಾತೆಗೆ ವೈಭವದ ಪಾವನ ಬ್ರಹ್ಮಕಲಶಾಭಿಷೇಕ 

01:00 AM Mar 14, 2019 | Team Udayavani |

ಪೊಳಲಿ: ಫ‌ಲ್ಗುಣಿ ನದಿಯ ತಟದಲ್ಲಿ ನೆಲೆಯಾಗಿರುವ ಜಗನ್ಮಾತೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಸನ್ನಿಧಿಯು ಬುಧವಾರ ಮುಂಜಾನೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿ ಯಾಯಿತು. ಅತ್ಯಪೂರ್ವ ದಾರು ಶಿಲ್ಪ-ಶಿಲಾಶಿಲ್ಪ ಸಹಿತವಾಗಿ ನಿರ್ಮಿಸ ಲಾಗಿರುವ ನೂತನ ದೇಗುಲದಲ್ಲಿ ಶ್ರೀ ರಾಜ ರಾಜೇಶ್ವರೀ ಹಾಗೂ ಪರಿವಾರ ದೇವತೆ ಗಳಿಗೆ ಬ್ರಹ್ಮಕಲಶಾಭಿಷೇಕ ಅತ್ಯಂತ ವೈಭವದಿಂದ ಜರಗಿತು. 

Advertisement

ಸೂರ್ಯೋದಯಕ್ಕೆ ಮುನ್ನವೇ ಪ್ರಾರಂಭಗೊಂಡ ವೈದಿಕ ವಿಧಿ ವಿಧಾನ ಗಳನ್ನು ಸಾವಿರಾರು ಭಕ್ತರು ಕಣ್ತುಂಬಿ  ಕೊಂಡರು. ಮಧ್ಯಾಹ್ನದ ಹೊತ್ತಿಗೆ ಪುಣ್ಯ ಕ್ಷಣಗಳಿಗೆ ಸಾಕ್ಷಿಯಾದ ಭಕ್ತರ ಸಂಖ್ಯೆ ಲಕ್ಷಕ್ಕೂ ಮಿಕ್ಕಿತ್ತು. ಬಹ್ವಂಶ ಭಕ್ತರು ನೇರವಾಗಿ ಬ್ರಹ್ಮಕಲಶಾ ಭಿಷೇಕವನ್ನು ವೀಕ್ಷಿಸಿದರೆ ಲಕ್ಷಾಂತರ ಮಂದಿ ಪರಿಸರದಲ್ಲಿ ಅಳ ವಡಿಸಿದ್ದ ಎಲ್‌ಇಡಿ ಪರದೆಗಳ ಮೂಲಕ ಪುಣ್ಯ ಕಾರ್ಯವನ್ನು ಕಂಡರು. 

ಗಣ್ಯರ ಉಪಸ್ಥಿತಿ
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ, ಕರ್ಣಾಟಕ ಬ್ಯಾಂಕ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷ ಪಿ. ಜಯರಾಮ ಭಟ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ರಮಾನಾಥ ರೈ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ನಳಿನ್‌ಕುಮಾರ್‌ ಕಟೀಲು, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಬಿ. ನಾಗರಾಜ ಶೆಟ್ಟಿ, ಅಧ್ಯಕ್ಷ ರಾಜೇಶ್‌ ನಾಯ್ಕ ಉಳಿಪ್ಪಾಡಿಗುತ್ತು, ಸಂಸದೆ ಶೋಭಾ ಕರಂದ್ಲಾಜೆ, ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ| ಮಂಜಯ್ಯ ಶೆಟ್ಟಿ, ಆನುವಂಶಿಕ ಮೊಕ್ತೇಸರರಾದ ಉಳಿಪ್ಪಾಡಿಗುತ್ತು ತಾರನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್‌, ಪಿ. ಮಾಧವ ಭಟ್‌, ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್‌, ಅರ್ಚಕರಾದ ನಾರಾಯಣ ಭಟ್‌, ಪರಮೇಶ್ವರ ಭಟ್‌, ಕೆ. ರಾಮ ಭಟ್‌, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಪದ್ಮನಾಭ ಕೋಟ್ಯಾನ್‌ ಗಣ್ಯರು ಪಾಲ್ಗೊಂಡಿದ್ದರು.

ಪೊಳಲಿ ಬ್ರಹ್ಮಕಲಶೋತ್ಸವ ಸಂಪನ್ನ
ಮಾ. 4ರಂದು ಪ್ರಾರಂಭಗೊಂಡಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲದ ಪುನಃಪ್ರತಿಷ್ಠೆ, ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವವು ಬುಧವಾರ ಬ್ರಹ್ಮ ಕಲಶಾಭಿಷೇಕದ ಮೂಲಕ ಸಂಪನ್ನ ಗೊಂಡಿದ್ದು, ಮಾ.14ರಂದು ಧ್ವಜಾರೋಹಣಗೊಂಡು ವಾರ್ಷಿಕ ಜಾತ್ರೋತ್ಸವ ಆರಂಭಗೊಳ್ಳಲಿದೆ. 

ಒಟ್ಟು ಹತ್ತು ದಿನಗಳ ಕಾಲ ನಡೆದ ಬ್ರಹ್ಮಕಲಶೋತ್ಸವವು ವೈಭವ ಯುತವಾಗಿ ಮುಕ್ತಾಯಗೊಂಡಿದ್ದು, ಲಕ್ಷಾಂತರ ಭಕ್ತರು ಪಾಲ್ಗೊಂಡು ಪೊಳಲಿಯ ನೂತನ ದೇಗುಲವನ್ನು ಕಂಡು ಪುನೀತ ರಾಗಿದ್ದಾರೆ. ದೇವರ ದರುಶನದ ಜತೆಗೆ ಊಟೋಪಹಾರ ವನ್ನು ಪಡೆದು ಸಂತುಷ್ಟರಾಗಿದ್ದಾರೆ. ಹತ್ತೂರಿನಿಂದ ಭಕ್ತರು ಪೊಳಲಿಗೆ ಆಗಮಿಸಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಭೇಟಿ ನೀಡಿದ್ದಾರೆ. ಇನ್ನು ಒಂದು ತಿಂಗಳ ಕಾಲ ಪೊಳಲಿ ಜಾತ್ರೋತ್ಸವ ನಡೆಯಲಿದೆ.

Advertisement

ಆಡಳಿತ ಮಂಡಳಿ ಅಭಿನಂದನೆ
ಕ್ಷೇತ್ರದಲ್ಲಿ 10 ದಿನ ಗಳಿಂದ ನಡೆಯುತ್ತಿದ್ದ ಬ್ರಹ್ಮ ಕಲಶೋತ್ಸವ ಬುಧವಾರ ರಾತ್ರಿ ಸಂಪ್ರೋಕ್ಷಣೆಯೊಂದಿಗೆ ಸಮಾಪನ ಗೊಂಡಿದ್ದು, ಈ ಮಹೋತ್ಸವ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

ಮಾ.4ರಿಂದ ಶ್ರೀ ಕ್ಷೇತ್ರದಲ್ಲಿ ನಡೆದ ಪುನಃಪ್ರತಿಷ್ಠೆ, ಅಷ್ಟಬಂಧ, ನೂತನ ಧ್ವಜಸ್ತಂಭ, ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ಬುಧವಾರದ ವರೆಗೆ ನಡೆದಿತ್ತು. ಈ ಸಂದರ್ಭ ನಡೆದ ಎಲ್ಲ ಕಾರ್ಯಕ್ರಮಗಳು ಶ್ರೀದೇವರ ದಯೆ ಹಾಗೂ ಸರ್ವರ ಕೂಡುವಿಕೆಯಿಂದ ನಿರೀಕ್ಷೆ ಮೀರಿ ಯಶಸ್ಸು ಗಳಿಸಿದ್ದಲ್ಲದೆ, ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

ಸಹಕರಿಸಿದ ನಾನಾ ಇಲಾಖೆಗಳಿಗೆ, ದೇಗುಲಗಳು ಮತ್ತು ಭಜನ ಮಂಡಳಿಗಳ ಆಡಳಿತ ಮಂಡಳಿ ಗಳಿಗೆ, ಸಂಘ- ಸಂಸ್ಥೆಗಳಿಗೆ, ದಾನಿ ಗಳಿಗೆ, ಸೇವಾ ಕರ್ತರಿಗೆ, ಕರಸೇವಕರು, ಸ್ವಯಂ ಸೇವಕರು, ಮಾಧ್ಯಮಗಳು, ಹೊರೆಕಾಣಿಕೆ ನೀಡಿದವರಿಗೆ, ವಾಹನ ಚಾಲಕ-ಮಾಲಕರಿಗೆ, ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದವರಿಗೆ ಅಭಿನಂದನೆಗಳು ಎಂದು ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

ಮೂರೂವರೆ ತಾಸು ಅಭಿಷೇಕ
ಕ್ಷೇತ್ರದ ತಂತ್ರಿಗಳಾದ ವೇ| ಮೂ| ಸುಬ್ರಹ್ಮಣ್ಯ ತಂತ್ರಿ ಮತ್ತು ವೇ| ಮೂ| ವೆಂಕಟೇಶ ತಂತ್ರಿಗಳ ಮಾರ್ಗದರ್ಶನ ಹಾಗೂ ವೇ| ಮೂ| ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಯರ ಸಹಭಾಗಿತ್ವದಲ್ಲಿ ಬ್ರಹ್ಮಕಲಶಾಭಿಷೇಕದ ವಿಧಿವಿಧಾನಗಳು ನಡೆದವು. 

ಮುಂಜಾನೆ 4ರ ಹೊತ್ತಿಗೆ ವೈದಿಕ ವಿಧಿವಿಧಾನಗಳು ಪ್ರಾರಂಭಗೊಂಡು 4.20ರ ಸುಮಾರಿಗೆ 40ಕ್ಕೂ ಅಧಿಕ ವೈದಿಕರು ಕಲಶ ಮಂಟಪದಿಂದ ಕಲಶಗಳನ್ನು ಸಾಗಿಸಿ, 4.50ರ ವೇಳೆ ಶ್ರೀ ರಾಜರಾಜೇಶ್ವರೀ, ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ದ್ರವ್ಯಾಭಿಷೇಕ ಆರಂಭಗೊಂಡಿತು. ಬಳಿಕ ಪರಿವಾರ ದೇವರಾದ ಶ್ರೀ ಸುಬ್ರಹ್ಮಣ್ಯ, ಶ್ರೀ ಭದ್ರಕಾಳಿ, ಶ್ರೀ ಮಹಾಗಣಪತಿ ದೇವರಿಗೆ ಅಭಿಷೇಕಗಳು ನಡೆದವು. 

ಶ್ರೀ ರಾಜರಾಜೇಶ್ವರೀ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ತಲಾ 501 ದ್ರವ್ಯಕಲಶಾಭಿಷೇಕ, ಪರಿವಾರ ದೇವರಿಗೆ 108 ಕಲಶಾಭಿಷೇಕ ನಡೆದು, 7.40ರ ಬಳಿಕ ಬ್ರಹ್ಮಕಲಶಾಭಿಷೇಕವನ್ನು ನೆರವೇರಿಸಲಾಯಿತು. 
ಮೂರೂವರೆ ಗಂಟೆಗಳ ಕಾಲ ಅಭಿಷೇಕ ಪ್ರಕ್ರಿಯೆಗಳು ನಡೆದವು. ಬೆಳಗ್ಗೆ 11ಕ್ಕೆ ಮಹಾಪೂಜೆ, ಮಧ್ಯಾಹ್ನ 12ಕ್ಕೆ ಸುಮಾರು 100 ಕ್ವಿಂಟಾಲ್‌ ಅನ್ನದ ಮಹಾಪಲ್ಲಕ್ಕೆ ಪಲ್ಲಪೂಜೆ ನಡೆಯಿತು. ಬಳಿಕ ಸೇರಿದ್ದ ಲಕ್ಷಾಂತರ ಭಕ್ತರಿಗೆ ಅನ್ನಪ್ರಸಾದವನ್ನು ವಿತರಿಸಲಾಯಿತು. ಬೆಳಗ್ಗಿನಿಂದಲೇ ಭಕ್ತರಿಗೆ ಉಪಾಹಾರ ಒದಗಿಸಲಾಗಿತ್ತು.  

ವೈಭವದ ನೇಮ
ಸಂಜೆ 5ಕ್ಕೆ ಮಹಾಪೂಜೆ, ದೊಡ್ಡ ರಂಗಪೂಜೆ, ರಾತ್ರಿ 8ರಿಂದ ಉತ್ಸವ ಬಲಿ, ಚಂದ್ರ ಮಂಡಲ ರಥ, ಬೆಳ್ಳಿ ರಥ, ಸಣ್ಣ ರಥೋತ್ಸವ, ವಸಂತ ಮಂಟಪದಲ್ಲಿ ಪೂಜೆ, ಅಷ್ಟಾವ ಧಾನ ಸೇವೆ, ಪಲ್ಲಕಿ ಉತ್ಸವ, ಮಹಾ ಪೂಜೆ ನಡೆಯಿತು. ರಾತ್ರಿ ಕೊಡಮಣಿತ್ತಾಯ ಮತ್ತು ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಗಳ ನೇಮ ನಡೆದಿದ್ದು, 8 ದಶಕಗಳ ಬಳಿಕ ಪೊಳಲಿಗೆ ಅರ್ಕುಳ ಬೀಡಿನಿಂದ ಭಂಡಾರ ಬಂದು ಶ್ರೀ ಉಳ್ಳಾಕ್ಲು -ಮಗೃಂತಾಯಿ ದೈವಗಳ
ನೇಮ ಜರಗಿತು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next