Advertisement

ಮಕ್ಕಳ ತುಂಟಾಟಕ್ಕೆ ಜಗನ್ಮೋಹನ ಅರಮನೆಯಲ್ಲಿ ನಕ್ಕು ಸುಸ್ತಾದ ಸಭಿಕರು

01:09 PM Sep 23, 2017 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ 2ನೇ ದಿನವಾದ ಶುಕ್ರವಾರ ಜಗನ್ಮೋಹನ ಅರಮನೆಯಲ್ಲಿ ಚಿಣ್ಣರ ಕಲರವ ಜೋರಾಗಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಪುಟಾಣಿಗಳ ಜತೆಗೆ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಮಿಂಚಿರುವ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ಚೆಲ್ಲಿದರು.

Advertisement

ದಸರಾ ಅಂಗವಾಗಿ ಆಯೋಜಿಸಿರುವ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಸರಿಗಮಪ ಹಾಗೂ ಡ್ರಾಮಾ ಜೂನಿಯರ್ ರಿಯಾಲಿಟಿ ಶೋಗಳ ಮಕ್ಕಳು ಸ್ಟಾರ್‌ ಆಕರ್ಷಣೆಯಾಗಿದ್ದರು. ತಮ್ಮ ಪ್ರತಿಭೆ ಮೂಲಕ ಕಿರುತೆರೆಯಲ್ಲಿ ಮಿಂಚಿರುವ ಪುಟಾಣಿಗಳು ಮಕ್ಕಳ ದಸರೆಯಲ್ಲೂ ತಮ್ಮ ಟ್ಯಾಲೆಂಟ್‌ ಪ್ರದರ್ಶಿಸಿ, ನೆರೆದಿದ್ದವರನ್ನು ರಂಜಿಸಿದರು.

ಸರಿಗಮಪ ಖ್ಯಾತಿಯ ವೈಷ್ಣವಿ ಅಪ್ಪಾ ಐ ಲವ್‌ ಯು ಪಾ ಗೀತೆ ಹಾಡಿ ನೆರೆದಿದ್ದವರನ್ನು ಗಾನಸುಧೆಯಲ್ಲಿ ಮುಳುಗಿಸಿದರೆ, ಡ್ರಾಮಾ ಜೂನಿಯರ್ ಪ್ರತಿಭೆಗಳಗಾದ ಮಹೇಂದ್ರ ಕೆಂಪೇಗೌಡ ಚಿತ್ರದ ಖಳನಾಯಕ ರವಿಶಂಕರ್‌ ಹಾಗೂ ಲಂಚವತಾರ ನಾಟಕದ ಮಾಸ್ಟರ್‌ ಹಿರಣ್ಣಯ್ಯ ಅವರ ಡೈಲಾಗ್‌ ಜತೆಗೆ ತಮ್ಮದೇ ಆದ ಲೊಟ್ಟೆ ನ್ಯೂಸ್‌ ಪ್ರಸ್ತುತ ಪಡಿಸಿ, ಸಭಿಕರ ಮೊಗದಲ್ಲಿ ನಗು ಚೆಲ್ಲಿದರು. ಇನ್ನೂ ಕಿರುತೆರೆ ಬಾಲನಟಿ ದಿಶಾ ತಾವು ಅಭಿನಯಿಸಿರುವ ನಾ ನಿನ್ನ ಬಿಡಲಾರೆ ಧಾರವಾಹಿ ನೋಡುವಂತೆ ಪ್ರೇಕ್ಷಕರಲ್ಲಿ ತೊದಲು ನುಡಿಯಲ್ಲಿ ಮನವಿ ಮಾಡಿದಳು.

ಮಕ್ಕಳ ದಸರೆಗೆ ಚಾಲನೆ: ಇದಕ್ಕೂ ಮುನ್ನ ಶಿಕ್ಷಣ ಸಚಿವ ತನ್ವೀರ್‌ ಸೇಠ್ 2ದಿನಗಳ ಮಕ್ಕಳ ದಸರೆಗೆ ಚಾಲನೆ ನೀಡಿದರು. ಅರಿವು ಮೂಡಿಸಿದ ಪ್ರದರ್ಶನ:  ವಿವಿಧ ಶಾಲಾ ಮಕ್ಕಳಿಂದ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಬನ್ನೂರಿನ ಕಸ್ತೂರ ಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಬಗೆ ಗೃಹಲಂಕಾರಿಕ ವಸ್ತುಗಳು, ಬಳೆ, ಚಿತ್ರಕಲೆ ಪ್ರದರ್ಶಿಸಿದರೆ, ಎಚ್‌.ಡಿ.ಕೋಟೆ ವಿದ್ಯಾರ್ಥಿಗಳು ಕರಕುಶಲ ಕಲೆ ಮತ್ತು ಕುಸುರಿ ಕಲೆ ಪರಿಚಯಿಸಿದರು.

ಮೈಸೂರು ತಾಲೂಕಿನ ಯರಗನಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಶಕ್ತಿ ರೂಪಾಂತರ ಕುರಿತು ಮಾಹಿತಿ ನೀಡಿದರೆ, ಗೋಪಾಲಸ್ವಾಮಿ ಶಿಶುವಿಹಾರದ ವಿದ್ಯಾರ್ಥಿಗಳು ಬಯೋಗ್ಯಾಸ್‌, ಹುಣಸೂರಿನ ವಿದ್ಯಾರ್ಥಿಗಳು ಹೃದಯ ಮತ್ತು ಶ್ವಾಸಕೋಶ, ನಂಜನಗೂಡು ತಾಲೂಕಿನ ವಿದ್ಯಾರ್ಥಿಗಳು ಗ್ರಹಗಳ ಚಲನೆ ಕುರಿತ ಪ್ರದರ್ಶನ ನೀಡಿದರು. ಮೇಯರ್‌ ಎಂ.ಜೆ.ರವಿಕುಮಾರ್‌, ಮಕ್ಕಳ ದಸರಾ ಉಪಸಮಿತಿ ಲತಾಮೋಹನ್‌, ರಾಣಿಪ್ರಭ, ಸವಿತಾ ಅನಿಲ್‌ಕುಮಾರ್‌, ಹರೀಶ್‌ಪ್ರಸಾದ್‌ ಇದ್ದರು.

Advertisement

ಚಿಣ್ಣರ ದಸರೆಗೆ ಚಾಲನೆ: ಇದಕ್ಕೂ ಮುನ್ನ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಆಳ್ವಾ ಚಿಣ್ಣರ ದಸರೆಗೆ ಚಾಲನೆ ನೀಡಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ಮಕ್ಕಳು ಗಾಂಧೀಜಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಇನ್ನಿತರ ವೇಷಭೂಷಣಗಳಿಂದ ಮಿಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next