ಹೊಸದಿಲ್ಲಿ: ರಾಮತೀರ್ಥಂ ದೇಗುಲದ ಶ್ರೀರಾಮನ ವಿಗ್ರಹ ಶಿರಚ್ಛೇದಗೊಳಿಸಿದ ವಿವಾದದ ಹಿನ್ನೆಲೆಯಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ರಾಜ್ಯಾದ್ಯಂತ ಆಂದೋಲನ ರೂಪಿಸುವುದಾಗಿ ಆಂಧ್ರಪ್ರದೇಶ ಬಿಜೆಪಿ ಎಚ್ಚರಿಕೆ ನೀಡಿದೆ.
“ಕೆಲವು ದಿನಗಳ ಹಿಂದೆ ಚರ್ಚ್‌ವೊಂದರ ಮೇಲೆ ದಾಳಿ ನಡೆದಾಗ, ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಶ್ರೀರಾಮನ ವಿಗ್ರಹವನ್ನು ಕಿಡಿಗೇಡಿಗಳು ಭಗ್ನಗೊಳಿಸಿ 10 ದಿನಗಳಾದರೂ ಇದು ವರೆಗೂ ಯಾರೊಬ್ಬರನ್ನೂ ಸರಕಾರ ಬಂಧಿಸಿಲ್ಲ’ ಎಂದು ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸರಕಾರಕ್ಕೆ ನಾವು ಮಕರ ಸಂಕ್ರಾಂತಿಯವರೆಗೆ ಗಡುವು ನೀಡುತ್ತೇವೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ ರಾಜ್ಯಾದ್ಯಂತ ಆಂದೋಲನ ರೂಪಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ. ಈಗಾಗಲೇ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಜಗನ್ ವಿರುದ್ಧ ಅಭಿಯಾನ ಆರಂಭಿಸಿದೆ.
ನಾಯ್ಡು ವಾಗ್ಧಾಳಿ: “ಸಿಎಂ, ಗೃಹಸಚಿವ, ಡಿಜಿಪಿ, ಎಸ್ಪಿ (ವಿಝಿಯಾನಗರಂ)… ಎಲ್ಲರೂ ಕ್ರಿಶ್ಚಿಯನ್ನರೇ. ಹಿಂದೂಗಳ ಭಾವನೆಯನ್ನು ಜಗನ್ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ದೇಗುಲ ದಾಳಿ ತಡೆಯಲು ಅಸಮರ್ಥರಾದ ಜಗನ್ ಒಂದು ನಿಮಿಷವೂ ಸಿಎಂ ಕುರ್ಚಿಯಲ್ಲಿ ಕೂರಲು ಅರ್ಹರಲ್ಲ’ ಎಂದು ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ.
ಹಿಂದೂಗಳ ಓಲೈಕೆ ಹಾದಿ ಹಿಡಿದ ಜಗನ್! :
ದೇಗುಲಗಳ ಮೇಲಿನ ದಾಳಿಯಿಂದಾಗಿ ಹಿಂದೂಗಳ ವಿರೋಧ ಕಟ್ಟಿಕೊಂಡಿರುವ ಸಿಎಂ ಜಗನ್ ಇನ್ನೊಂದೆಡೆ “ಓಲೈಕೆ’ ತಂತ್ರ ಆರಂಭಿಸಿದ್ದಾರೆ. ವಿಜಯವಾಡದಲ್ಲಿ 2016ರಲ್ಲಿ ನೆಲಸಮಗೊಂಡ 9 ದೇಗುಲಗಳ ಪುನರ್‌ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿದ್ದಾರೆ. ಈ ವೇಳೆ ಅವರು ಪ್ರಸಿದ್ಧ ಇಂದ್ರಕೀಲಾದ್ರಿ ಬೆಟ್ಟದ ಕನಕದುರ್ಗ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.