ಅಮರಾವತಿ : ಅಭೂತಪೂರ್ವ ಕ್ರಮವೊಂದರಲ್ಲಿ ಆಂಧ್ರ ಪ್ರದೇಶದ ನೂತನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತನ್ನ 25 ಸದಸ್ಯರ ಸಚಿವ ಸಂಪುಟದಲ್ಲಿ ಐವರು ಉಪ ಮುಖ್ಯಮಂತ್ರಿಗಳನ್ನು ಹೊಂದಲು ನಿರ್ಧರಿಸಿದ್ದಾರೆ.
ಇದೇ ಶನಿವಾರ ಏರ್ಪಡಿಸಲಾಗುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಿಎಂ ಜಗನ್ ಅವರ ನೂತನ ಸಚಿವ ಸಂಪುಟ ರಚನೆಯಾಗಲಿದೆ.
ಸಿಎಂ ಜಗನ್ ಅವರಿಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಿ ಐವರು ಉಪ ಮುಖ್ಯಮಂತ್ರಿಗಳನ್ನು ಹೊಂದುವ ನಿರ್ಧಾರವನ್ನು ಪ್ರಕಟಿಸಿದರು.
ಆ ಪ್ರಕಾರ ಎಸ್‌ಸಿ, ಎಸ್‌ಟಿ, ಬಿಸಿ, ಅಲ್ಪಸಂಖ್ಯಾಕ ಮತ್ತು ಕಾಪು ಸಮುದಾಯದ ತಲಾ ಓರ್ವರು ಜಗನ್ ಅವರ ಉಪ ಮುಖ್ಯಮಂತ್ರಿಗಳಾಗಲಿದ್ದಾರೆ.
ತನ್ನ ಸಚಿವ ಸಂಪುಟದಲ್ಲಿ ದುರ್ಬಲ ವರ್ಗದ ಸದಸ್ಯರೇ ಪ್ರಧಾನವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಜಗನ್ ಹೇಳಿದರು. ಇದರಿಂದಾಗಿ ರೆಡ್ಡಿ ಸಮುದಾಯಕ್ಕೆ ಜಗನ್ ಸಚಿವ ಸಂಪುಟದಲ್ಲಿ ಸಿಂಹ ಪಾಲು ಸಿಗುವುದೆಂಬ ಊಹೆ ಸುಳ್ಳಾಯಿತು.
ಎರಡು-ಎರಡೂವರೆ ವರ್ಷಗಳ ತರುವಾಯ ಸಚಿವ ಸಂಪುಟವನ್ನು ಪುನರ್ ರಚಿಸಲಾಗುವುದು; ಅದಕ್ಕಾಗಿ ಸರಕಾರ ಕಾರ್ಯನಿರ್ವಹಣೆಯ ಮಧ್ಯಾವಧಿ ಪರಾಮರ್ಶೆಯನ್ನು ಮಾಡಲಾಗುವುದು ಎಂದು ಸಿಎಂ ಜಗನ್ ಹೇಳಿದರು.