Advertisement

ಮಕ್ಕಳ ಮೇಲೆ ಪರಭಾಷೆ ವ್ಯಾಮೋಹ ಹೇರದಿರಿ

11:32 AM Nov 23, 2019 | Naveen |

ಜಗಳೂರು: ಮಕ್ಕಳು ಸಸಿ ಇದ್ದಂತೆ. ಅವರನ್ನು ನಾವು ಬೆಳೆಸುವ ರೀತಿಯಲ್ಲಿ ಬೆಳೆಯುತ್ತಾರೆ. ಪರಭಾಷಾ ವ್ಯಾಮೋಹದಿಂದ ಮಕ್ಕಳ ಮೇಲೆ ಒತ್ತಾಯಪೂರ್ವಕವಾಗಿ ಹೇರುವ ಶಿಕ್ಷಣ ಪದ್ಧತಿ ಬದಲಾಗಿ ನಿರ್ದಿಷ್ಟ ಶಿಕ್ಷಣ ಪದ್ಧತಿ ಜಾರಿಯಾಗಬೇಕು ಎಂದು ನಿವೃತ್ತ ಶಿಕ್ಷಕ ಡಿ.ಸಿ. ಮಲ್ಲಿಕಾರ್ಜುನ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಪಟ್ಟಣದ ಹನುಮಂತಾಪುರ ಪ್ರೌಢಶಾಲೆ ಆವರಣದಲ್ಲಿ ಕನ್ನಡ ಭಾಷಾ ವೇದಿಕೆ ಹಮ್ಮಿಕೊಂಡಿದ್ದ ಕನ್ನಡ ಭಾಷಾ ಶಿಕ್ಷಕರಿಗೆ ಕಾರ್ಯಾಗಾರ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೋಷಕರು ಆಂಗ್ಲ ಭಾಷೆ ವ್ಯಾಮೋಹದಿಂದ, ಮಗು ಇಂಜಿನೀಯರಿಂಗ್‌, ಮೆಡಿಕಲ್‌ ಓದುಬೇಕೆಂಬ ದುರಾಸೆಯಿಂದ ಮಕ್ಕಳನ್ನು ಇಂಗ್ಲಿಷ್‌ ಕಾನ್ವೆಂಟ್‌ಗಳಿಗೆ ಸೇರಿಸುವ ಆಲೋಚನೆ ಮಾಡುತ್ತಿರುವುದರಿಂದಲೇ ಮಾತೃಭಾಷೆಗೆ ಆದ್ಯತೆ ನೀಡುತ್ತಿಲ್ಲ. ಪೋಷಕರು ಇಂಗ್ಲಿಷ್‌ ವ್ಯಾಮೋಹವನ್ನು ತೊರೆದು ಕನ್ನಡ ಭಾಷೆಗೆ ಆದ್ಯತೆ ನೀಡಿ, ಗುಣಮಟ್ಟದ ಶಿಕ್ಷಣ ಕೊಡಿಸಿದರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ. ಇದರಿಂದ ಮಾದರಿ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಸಲಹೆ ನೀಡಿದರು.

ಜಪಾನ್‌, ಚೀನಾದಲ್ಲಿ ಮಾತೃಭಾಷೆಗೆ ಒತ್ತು ನೀಡಿದ್ದರ ಪರಿಣಾಮ ಇಂದು ತಂತ್ರಜ್ಞಾನದಲ್ಲಿ ಪ್ರಪಂಚಕ್ಕೆ ಮಾದರಿಯಾಗಿವೆ. ಆದರೆ ಭಾರತ ದೇಶದ ಶಿಕ್ಷಣ ವ್ಯವಸ್ಥೆ ಭಯೋತ್ಪಾದನೆಯ ತೊಟ್ಟಿಲಾಗಿದೆ. ಇದು ಬದಲಾಗಿ ಅಂಬೇಡ್ಕರ್‌, ಗಾಂಧೀಜಿ ಅವರ ಅಹಿಂಸಾತ್ಮಕ ಶಿಕ್ಷಣ ನೀತಿಗಳು ಜಾರಿಯಾಗಬೇಕು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕ ಆಂಜನೇಯ, ಪ್ರತಿವರ್ಷವೂ ನಮ್ಮ ವೇದಿಕೆಯಡಿ ಕಾರ್ಯಾಗಾರ ಆಯೊಜಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕೊಡಿಸುವ ಮೂಲಕ ಭಾಷಾ ಶಿಕ್ಷಕರ ಕ್ಲಿಷ್ಟಕರ ಸಮಸ್ಯೆಗಳನ್ನು ಪರಿಹರಿಸಿ, ಕನ್ನಡ ಭಾಷೆ,ನೆಲ-ಜಲ- ಸಂಸ್ಕೃತಿ ಉಳಿಸುವ ಚಿಂತನೆ ನಮ್ಮದಾಗಿದೆ ಎಂದರು.

ತಾಲೂಕಿನಲ್ಲಿ 44 ಶಾಲೆಗಳಿದ್ದು, ಪ್ರತಿವರ್ಷ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆವ ವಿದ್ಯಾರ್ಥಿಗಳು  ಹಾಗೂ ಕಾರಣೀಕರ್ತರಾದ ಶಿಕ್ಷಕರನ್ನು ಉತ್ತೇಜಿಸಲು ಪುರಸ್ಕರಿಸಲಾಗುವುದು ಎಂದು ತಿಳಿಸಿದರು.

Advertisement

ಬಿಇಓ ಯುವರಾಜ್‌ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಾಜಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ಇಸಿಓ ಮಂಜುನಾಥ, ನೌಕರ ಸಂಘದ ಮಾಜಿ ಅಧ್ಯಕ್ಷ ಸತೀಶ್‌, ನಿವೃತ್ತ ಶಿಕ್ಷಕರಾದ ಮುಸ್ಟೂರಪ್ಪ, ನಾರಾಯಣ ರೆಡ್ಡಿ, ಕನ್ನಡ ಭಾಷಾ ಪರಿವೀಕ್ಷಕ ಕುಮಾರ್‌ ಹನುಮಂತಪ್ಪ ಸಾರಥಿ, ಉಪ ಪ್ರಾಂಶುಪಾಲ ಹಾಲಪ್ಪ, ಮುಖ್ಯ ಶಿಕ್ಷಕರಾದ ಸಿದ್ದಲಿಂಗಪ್ಪ, ಬಾಲರಾಜ್‌, ಶಿಕ್ಷಕರಾದ ತಿಪ್ಪೇಸ್ವಾಮಿ, ಲಂಕೇಶ್‌, ವಿಜಯಕುಮಾರ್‌, ಶಿವಮ್ಮ, ಸೌಮ್ಯ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next