ಜಗಳೂರು: ತರಕಾರಿ ಮಳಿಗೆಗಳ ವ್ಯಾಪಾರಸ್ಥರು ಅತಿಕ್ರಮಣ ಮಾಡಿಕೊಂಡಿರುವ ಮಳಿಗೆ ಮುಂದಿನ ಜಾಗೆಯನ್ನು ತೆರವುಗೊಳಿಸುವ ಕಾರ್ಯಚರಣೆ ಶನಿವಾರ ಸಂಜೆ ಪಟ್ಟಣ ಪಂಚಾಯಿತಿಯಿಂದ ನಡೆಯಿತು.
ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿದ್ದ ತರಕಾರಿ ಮಳಿಗೆಗಳನ್ನು ಇಲಾಖೆ ವತಿಯಿಂದ ಕಳೆದ ಮೂರು ವರ್ಷಗಳ ಹಿಂದೆ ಬಹಿರಂಗ ಹರಾಜು ಮಾಡಲಾಗಿತ್ತು. ಹರಾಜಿನಲ್ಲಿ ಮಳಿಗೆಗಳನ್ನು ಬಾಡಿಗೆ ಪಡೆದ ವ್ಯಾಪಾರಸ್ಥರು ಮಳಿಗೆಯ ಮುಂಭಾಗದಲ್ಲಿರುವ ಜಾಗವನ್ನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿಕೊಂಡಿದ್ದರು. ಅತಿಕ್ರಮಣದಿಂದ ಇಲ್ಲಿ ವ್ಯಾಪಾರಕ್ಕೆ ಬರುವಂತಹ ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಈ ಕುರಿತು ಕ್ರಮ ಕೈಗೊಂಡು ವರದಿ ನಿಡಬೇಕೆಂದು ಲೊಖಾಯುಕ್ತರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ನೊಟೀಸ್ ನೀಡಿದ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
ಒತ್ತುವರಿ ಮಾಡಿದ 7 ಮಳಿಗೆಗಳಿಗೆ ಜೂ. 6 ರಂದು ಪಟ್ಟಣ ಪಂಚಾಯಿತಿ ನೋಟಿಸ್ ಜಾರಿ ಮಾಡಿ ಅತಿಕ್ರಮಿತ ಜಾಗವನ್ನು ನೊಟೀಸ್ ನೀಡಿದ 7 ದಿನಗಳೊಗಾಗಿ ತೆರವುಗೊಳಿಸುವಂತೆ ಸೂಚನೆ ನೀಡಿತ್ತು. ಆದರೆ ಮಳಿಗೆದಾರರು ಸ್ವಯಂ ಪ್ರೇರಿತರಾಗಿ ಅತಿಕ್ರಮಣ ತೆರವು ಮಾಡದೇ ಇದ್ದುದರಿಂದ ಜೂ. 14 ರ ಸಂಜೆ ತೆರವು ಕಾರ್ಯಾಚರಣೆ ಆರಂಭಿಸಲಾಯಿತು.
ಮಳಿಗೆಯಲ್ಲಿನ ವಸ್ತುಗಳನ್ನು ಸ್ಥಳಾಂತರಿಸಲು ಜೂ. 20ರವರೆಗೆ ಕಾಲಾವಕಾಶ ನೀಡಬೇಕು ಎಂದು ಮಳಿಗೆದಾರರು ಮುಚ್ಚಳಿಕೆ ಪಾತ್ರ ನೀಡಿ ಅವಧಿ ಕೇಳಿದ್ದರಿಂದ ಜೂ. 20 ರವರೆಗೆ ಕಾಲಾವಕಾಶ ನೀಡಲಾಗಿದೆ. ಈಗಾಗಲೇ ಒಂದು ಮಳಿಗೆ ಅತಿಕ್ರಮಣ ತೆರವುಗೊಳಿಸಲಾಗಿದ್ದು, ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜೂ. 20ರ ಮಧ್ಯಾಹ್ನದ ನಂತರ ಉಳಿದ ಮಳಿಗೆಗಳ ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಕಂಪಳಮ್ಮ ಹೇಳಿದರು.
ಕಾರ್ಯಾಚರಣೆಯಲ್ಲಿ ಮುಖ್ಯಾಧಿ ಕಾರಿ ಕಂಪಳಮ್ಮ, ಆರ್.ಐ. ಸಂತೋಷ್, ಆರೋಗ್ಯ ನಿರೀಕ್ಷಕ ಕಿಫಾಯತ್, ಇತರ ಸಿಬ್ಬಂದಿ ಇದ್ದರು.