ಜಗಳೂರು: ತಾಲೂಕಿನ ಉದ್ಘಟ್ಟ ಗ್ರಾಮದ ಹೊರವಲಯದಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಕ್ವಾರಂಟೈನ್‌ಗೆ ಬಳಕೆ ಮಾಡದಂತೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆ ಬಂದ್ ಮಾಡಿ ಮುಳ್ಳಿನ ಬೇಲಿ ಹಾಕಿ ಪ್ರತಿಭಟನೆ ನಡೆಸಿ ತಹಶಿಲ್ದಾರ್‌ಗೆ ಮನವಿ ಸಲ್ಲಿಸಿದರು.
ಜೆಸಿಬಿ ಮೂಲಕ ರಸ್ತೆ ದ್ವಾರಕ್ಕೆ ತಗ್ಗು ತೆಗೆದು ಮುಳ್ಳಿನ ಬೇಲಿ ಹಾಕಿದ ನಂತರ ಮುಖಂಡರು ತಾಲೂಕು ಕಚೇರಿಗೆ ಆಗಮಿಸಿ ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಅವರಿಗೆ ಮನವಿ ನೀಡಿದರು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸಮೀಪ ಕೃಷಿ ಜಮೀನುಗಳಿವೆ. ವಸತಿ ಶಾಲೆಯನ್ನು ಕ್ವಾರಂಟೈನ್‌ಗೆ ನೀಡುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಭಯ ಬೀತರಾಗುತ್ತಾರೆ .
ಅಲ್ಲದೆ ಜಮೀನಿಗೆ ತೆರಳಲು ಕೂಲಿ ಕಾರ್ಮಿಕರು, ರೈತರು ಮೀನಾಮೇಷ ಎಣಿಸುತ್ತಾರೆ. ಆದ್ದರಿಂದ ತಾವು ವಸತಿ ಶಾಲೆಯನ್ನು ಕ್ವಾರಂಟೈನ್ ಮಾಡುವ ನಿರ್ಣಯ ಕೈಬಿಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ, ತಾಲೂಕಿನ ಎಲ್ಲಾ ಸರ್ಕಾರಿ ಕಟ್ಟಡಗಳನ್ನು ಕ್ವಾರಂಟೈನ್‌ಗೆ ಬಳಕೆ ಮಾಡುವಂತೆ ಜಿಲ್ಲಾಧಿಕಾರಿಗಳ ನಿರ್ದೇಶನವಿದೆ. ಸ್ಥಳೀಯರನ್ನು ಕ್ವಾರಂಟೈನ್‌ಗೆ ಸೇರಿಸುವ ಅನಿವಾರ್ಯತೆ ಎದುರಾದಾಗ ತಾವು ಏನೆಂದು ಉತ್ತರಿಸುತ್ತೀರಿ ಎಂದು ಪ್ರಶ್ನಿಸಿದರು. ಸಾರ್ವಜನಿಕರು ಸಹಕಾರ ನೀಡಬೆಕೇ ವಿನಃ ಅಡ್ಡಿಪಡಿಸಬಾರದು ಎಂದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಂಜುನಾಥ್ ಕಲ್ಲೇಶ್, ಸಿದ್ದಪ್ಪ, ಚಂದ್ರಪ್ಪ ,ರಂಗಪ್ಪ, ಆಂಜನೇಯ, ಗ್ರಾಪಂ ಸದಸ್ಯ ಚಂದ್ರಮೌಳೇಶ್ ಇತರರು ಇದ್ದರು.