ಜಗಳೂರು: ಪರೀಕ್ಷೆ ನಡೆಯುವ ಸಂದರ್ಭದಲ್ಲೇ ಅಕ್ಷರ ದಾಸೋಹ ಅಧಿಕಾರಿಗಳು ಆಹಾರ ಪದಾರ್ಥಗಳನ್ನು ಪೂರೈಕೆ ಮಾಡದ ಹಿನ್ನೆಲೆಯಲ್ಲೆ ಹನುಮಂತಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ವಿದ್ಯಾರ್ಥಿಗಳು ಬಿಸಿಯೂಟ ಇಲ್ಲದೆ ಪರೀಕ್ಷೆ ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಹನುಮಂತಪುರ ಗ್ರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 140ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ನಾಲ್ಕಾರು ದಿನಗಳಿಂದ ಆಹಾರ ಪದಾರ್ಥಗಳು ಇಲ್ಲದೆ ಬಿಸಿಯೂಟ ಸಿಗದೆ ಹಸಿವಿನಲ್ಲೇ ಪರೀಕ್ಷೆ ಎದುರಿಸುತ್ತಿದ್ದಾರೆ.
ಪ್ರಸಕ್ತ ಸಂದರ್ಭದಲ್ಲಿ ಪರೀಕ್ಷೆಗಳು ಜರುಗುತ್ತಿದ್ದು, ಬೆಳಗ್ಗೆ 10:30 ರಿಂದ ಮಧ್ಯಹ್ನ 1 ಗಂಟೆವರೆಗೆ ಪರೀಕ್ಷೆ ನಡೆಯುತ್ತಿದೆ. ಮಕ್ಕಳು ಬಿಸಿಯೂಟವಿಲ್ಲದೆ ಪರದಾಡುವಂತ ಸನ್ನಿವೇಶ ಸೃಷ್ಠಿಯಾಗಿದೆ. ಅಧಿಕಾರಿಗಳಿಗೆ ಕೇಳಿದರೆ ಲಾರಿಗಳು ಕೆಟ್ಟು ನಿಂತಿವೆ. ಒಂದೇ ಲಾರಿಯಲ್ಲೇ ಆಹಾರ ಪೂರೈಕೆ ಮಾಡಲಾಗುತ್ತಿದೆ. ಒಂದೆರೆಡು
ದಿನ ತಡವಾಗಬಹುದು ಎಂದು ಉಡಾಫೆಯಾಗಿ ಉತ್ತರ ನೀಡುತ್ತಾರೆ. ಅಕ್ಷರ ದಾಸೋಹ ಅಧಿಕಾರಿಗಳು ಆಹಾರ ಪದಾರ್ಥ ಪೂರೈಕೆ ಮಾಡಲು ಲಾರಿ ಕೆಟ್ಟು ನಿಂತರೆ ಬದಲಿ ವಾಹನದ ಮೂಲಕ ಕಳುಹಿಸಿಕೊಡಬಹುದು. ಆದರೆ, ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದ್ದಾರೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಶಿಕ್ಷಕರನ್ನು ಈ ವಿಚಾರವಾಗಿ ಕೇಳಿದರೆ, ಆಹಾರ ಪದಾರ್ಥ ಖಾಲಿಯಾಗಿವೆ. ಪಕ್ಕದ ತಮಲೆಹಳ್ಳಿ ಗ್ರಾಮದ ಶಾಲೆಯಿಂದ ತಂದು ಮಾಡುತ್ತೇವೆ. ಪರೀಕ್ಷೆ ನಡೆಯುತ್ತಿರುವುದರಿಂದ ಹೋಗಿ ತರಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಮುಖ್ಯಶಿಕ್ಷಕ ನಿಂಗಪ್ಪ . ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವ ಕಾರಣಕ್ಕಾಗಿಯೇ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಶಾಲೆಯಲ್ಲಿ ಅಕ್ಕಿ, ಬೆಳೆ ಸೇರಿದಂತೆ ಅಡುಗೆ ಮಾಡವ ಆಹಾರ ಪದಾರ್ಥಗಳಿಲ್ಲ ಎಂಬ ಕಾರಣಕ್ಕೆ ಮಕ್ಕಳಿಗೆ ಊಟ ಹಾಕದೆ ಕಳುಹಿಸುತ್ತಿದ್ದಾರೆ ಎಂದು ಗ್ರಾಮದ ವಿಜಯ್, ನಾಗರಾಜ್, ಆರೋಪಿಸಿದ್ದಾರೆ.
ಮೂರು ದಿನಗಳಿಂದ ಆಹಾರ ಪದಾರ್ಥಗಳ ಸಮಸ್ಯೆ ಇದೆ. ಆಹಾರ ಸಾಮಗ್ರಿಗಳನ್ನು ನೀಡಿದರೆ ಆಡುಗೆ ಮಾಡುತ್ತೇವೆ. ಆಹಾರ ಪದಾರ್ಥಗಳು ಇಲ್ಲದೆ ಸುಮ್ಮನೆ ಕೂರುವಂತಾಗಿದೆ ಎಂದು ಅಡುಗೆ ತಯಾರಕರು ಒಲ್ಲದ ಮನಸ್ಸಿನಿಂದ ಹೇಳುತ್ತಾರೆ.
ಆಹಾರ ಪದಾರ್ಥಗಳನ್ನು ಲೋಡ್ ಮಾಡಿ ಕಳುಹಿಸಲಾಗುತ್ತಿದೆ. ಲಾರಿಗಳು ಕೆಟ್ಟು ನಿಂತಿರುವುದರಿಂದ ತಡವಾಗಿದೆ. ಕೂಡಲೇ ಶಾಲೆಗಳಿಗೆ ಆಹಾರ ಪೂರೈಸುವ ಕೆಲಸ ಮಾಡಲಾಗುತ್ತದೆ.
. ಶ್ರೀನಿವಾಸ್,
ಅಕ್ಷರ ದಾಸೋಹ ಸಹಾಯಕ
ನಿರ್ದೇಶಕರು, ಜಗಳೂರು.