Advertisement

ಮಾರ್ಗ ನಿರ್ಧಾರಕ್ಕೆ ಸಮನ್ವಯ ಸಮಿತಿ ಅಗತ್ಯ

03:22 PM Jun 23, 2019 | Team Udayavani |

ಜಗಳೂರು: ಸಮಗ್ರ ನೀರಾವರಿ ಜಾರಿಗಾಗಿ ಹಮ್ಮಿಕೊಂಡಿರುವ ಹೋರಾಟಕ್ಕೆ ನಮ್ಮ ಬೆಂಬಲವಿದ್ದು, ಜಗಳೂರು ಶಾಖಾ ಕಾಲುವೆ ನಿರ್ಮಾಣಕ್ಕೆ ಸೂಕ್ತ ಮಾರ್ಗ ಯಾವುದೆಂದು ಚರ್ಚಿಸಲು ಸಮನ್ವಯ ಸಮಿತಿ ರಚಿಸುವ ಅಗತ್ಯವಿದೆ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್‌ ಹೇಳಿದರು.

Advertisement

ಪಟ್ಟಣದ ತಾಲೂಕು ಕಛೇರಿ ಮುಂಭಾಗದಲ್ಲಿ ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ 7 ನೇ ದಿನದ ಮುಷ್ಕರ ನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕಾಲುವೆ ಮಾರ್ಗ ನಿರ್ಮಾಣಕ್ಕೆ ನೀರಾವರಿ ನಿಗಮದ ಅಧಿಕಾರಿ ದೇಸಾಯಿ ಅವರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ಸ್ಪಷ್ಟವಾದ ನಿರ್ಧಾರ ತಿಳಿಸುವುದು ತಡವಾಯಿತು. ಅದೇ ವೇಳೆ ಚುನಾವಣೆ ಬಂದ ಕಾರಣ ಮತ್ತೆ ಸಮಿತಿ ಸಭೆ ಸೇರುವುದು ಸಾಧ್ಯವಾಗಲಿಲ್ಲ ಎಂದರು.

ನನೆಗುದಿಗೆ ಬಿದ್ದ ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪ್ರಾರಂಭಿಸಲು ತಾಂತ್ರಿಕ ಹಾಗೂ ಆರ್ಥಿಕ ಅನುಮೊದನೆಗಳು ಬೇಕಾಗಿದೆ. ಇದಕ್ಕೂ ಮುನ್ನ ಜಗಳೂರು ತಾಲೂಕಿಗೆ ಯಾವ ಮಾರ್ಗದಿಂದ ನೀರು ಬಂದರೆ ಸೂಕ್ತ ಎನ್ನುವುದು ಚರ್ಚೆಯಾಗಬೇಕಿದೆ. ಮಾರ್ಗ ನಿರ್ಧಾರಕ್ಕಾಗಿ ನೀರಾವರಿ ನಿಗಮದ ಅಧಿಕಾರಿಗಳು, ಹೋರಾಟ ಸಮಿತಿ, ಸ್ಥಳೀಯ ಜನಪ್ರತಿನಿಧಿಗಳು ಸೇರಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ ಎಂದರು.

ನಮ್ಮ ಸರಕಾರದ ಅವಧಿಯಲ್ಲಿ 52 ಕೆರೆಗಳಿಗೆ ನೀರು ತುಂಬಿಸುವ 650 ಕೋಟಿ ರೂ. ಯೋಜನೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ 250 ಕೋಟಿ ರೂ. ಮಿಸಲಿಟ್ಟಿದ್ದರು. ಈ ಯೋಜನೆಗೆ ಈಗ ಸರಕಾರ ಟೆಂಡರ್‌ ಕರೆಯಲಿದೆ.

ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಸರಕಾರವು ಈ ಗಾಗಲೇ ಡಿಪಿಆರ್‌ ಸಿದ್ಧಪಡಿಸಿದ್ದು, ಕೆಲವೇ ದಿನಗಳಲ್ಲಿ ಟೆಂಡರ್‌ ಕರೆಯಲಿದೆ. ಈ ಮೂರು ಯೋಜನೆಗಳು ತಾಲೂಕಿಗೆ ಬಂದರೆ ಮಾತ್ರ ನಾವು ಉಸಿರಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.

Advertisement

ದೇಸಾಯಿ ಸಮಿತಿ ಸದಸ್ಯ ಕೆ.ಬಿ.ಕಲ್ಲೇರುದ್ರೇಶ್‌ ಮಾತನಾಡಿ, ಸೂಕ್ತ ಮಾರ್ಗ ನಿರ್ಮಾಣಕ್ಕಾಗಿ ಸಮಿತಿಯನ್ನು ರಚಿಸಲಾಗಿತ್ತಾದರೂ ಯಾವುದೇ ನಿರ್ಧಾರವಾಗಿಲ್ಲ. ಬೆಳಘಟ್ಟ ಮಾರ್ಗದಿಂದ ಸಂಗೇನಹಳ್ಳಿ ಕೆರೆಗೆ ನೀರು ಹಾಯಿಸಿ ಜಗಳೂರು ತಾಲೂಕು ಸಮಗ್ರ ನೀರಾವರಿಗೆ ಒತ್ತಾಯಿಸುವ ನಮ್ಮ ನಿರ್ಧಾರ ಅಚಲವಾಗಿದ್ದು, ಕೂಡಲೇ ಸಚಿವರು, ಅಧಿಕಾರಿಗಳ ಸಭೆ ಕರೆಯಬೇಕೆಂದು ಆಗ್ರಹಿಸಿದರು. ಹೋರಾಟ ಸಮಿತಿ ಸದಸ್ಯ ಪ್ರಕಾಶ್‌ ರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಕುರಿತು ತಾಲೂಕಿನಲ್ಲಿ ಗೊಂದಲಮಯ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಕೆಲವರು ಹೋರಾಟ ಒಂದು ಹೋಬಳಿಗೆ ಸೀಮಿತವೆಂದು ತಪ್ಪು ಮಾಹಿತಿ ನೀಡಿ ದಿಕ್ಕುತಪ್ಪಿಸುತ್ತಿದ್ದಾರೆ. ತಾಲೂಕಿನ ಸಮಗ್ರ ನೀರಾವರಿ ನಮ್ಮ ಗುರಿಯಾಗಿದೆ ಎಂದರು.

ಬೆಳಘಟ್ಟ ಮಾರ್ಗದಿಂದ ಸಂಗೇನಹಳ್ಳಿ ಕೆರೆಗೆ ಕೇವಲ 14 ಕಿ.ಮೀ. ಅಂತರವಿದ್ದು ಈ ಮಾರ್ಗದ ಮುಖಾಂತರ ನೀರು ಬರಬೇಕು. ಕಾತ್ರಾಳ್‌ ಮಾರ್ಗದಿಂದ ಜಗಳೂರು ತಾಲೂಕಿಗೆ 75 ಕಿ.ಮೀ. ಅಂತರವಾಗುತ್ತಿದ್ದು ಕೊನೆಯ ಭಾಗಕ್ಕೆ ನೀರು ಬರುವುದಿಲ್ಲ ಎಂಬ ಆಂತಕವಿದೆ. ನಮ್ಮ ನಿರ್ಧಾರ ಅಚಲವಾಗಿದ್ದು, ಸರಕಾರ ಶೀಘ್ರವೇ ಸಮಸ್ಯೆ ಪರಿಹರಿಸಬೇಕು ಎಂದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಮುದೇಗೌಡ್ರು ಬಸವರಾಜಪ್ಪ, ಸದಸ್ಯ ಎಸ್‌.ಬಿ. ಕುಬೇಂದ್ರಪ್ಪ ಪಿಎಲ್ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಲಿಂಗಣ್ಣನಹಳ್ಳಿ ತಿಮ್ಮರಾಯಪ್ಪ, ಎನ್‌.ಎಸ್‌. ರಾಜು, ಮುಖಂಡರಾದ ಎಲ್.ಭೃರೇಶ್‌, ಗಿರೀಶ್‌ ಒಡೆಯರ್‌, ಸುರೇಶ್‌ ನಾಯ್ಕ, ಬಂಗಾರಪ್ಪ, ರಾಜು ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next