ಜಗಳೂರು: ಹಾಲಿ ಶಾಸಕರು ಅಭಿವೃದ್ದಿಯ ಕಡೆ ಆಸಕ್ತಿ ತೋರುತ್ತಿಲ್ಲ. ಬಹು ಗ್ರಾಮ ಕುಡಿಯುವ ನೀರಿನ ಕಡತ ಇಲ್ಲ ಎಂದು ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಆ ಕಡತವನ್ನು ನಾನು ನೀಡುತ್ತೇನೆ. ಕಡತ ನೀಡಿದ ಮೇಲೆ ಶಾಸಕನ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು. ಕಡತ ಸಿಗಲಿಲ್ಲವೆಂದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಶಾಸಕ ಎಚ್.ಪಿ ರಾಜೇಶ್ ಹಾಲಿ ಶಾಸಕರಿಗೆ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸಿಸಿ ರಸ್ತೆ, ಸಂಪರ್ಕ ರಸ್ತೆ ಸಮುದಾಯ ಭವನ ವಸತಿ ಶಾಲೆಗಳನ್ನು ನಿರ್ಮಿಸಿದ್ದೇನೆ. ನೂತನವಾಗಿ ಕೆರೆ ಮತ್ತು ಚೆಕ್ ಡ್ಯಾಂ ನಿರ್ಮಿಸಿದ್ದೇನೆ ಎಂದರು.
ಹಾಲಿ ಶಾಸಕರು ಆಧಾರರಹಿತವಾಗಿ ನನ್ನ ಮೇಲೆ ಟೀಕೆ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕೆಲಸ ಮಾಡಿ ತೋರಿಸಲಿ. 5 ಕೋಟಿ ರೂ. ಕೆರೆ ಕಾಮಗಾರಿ ಹೆಸರಿನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ನಾವು 1.56 ಕೋಟಿ ರೂ. ವೆಚ್ಚದಲ್ಲಿ ಕೆರೆಯ ಸುತ್ತ ವಾಕ್‌ಪಾತ್, ತಡೆಗೋಡೆ, ನಿರ್ಮಿಸಿ ಸಂರಕ್ಷಿಸಲಾಗಿದ್ದು, 55 ಲಕ್ಷ ರೂ. ವೆಚ್ಚದಲ್ಲಿ ರಂಗಪುರ ಗ್ರಾಮದ ಸಮೀಪದ ಚೆಕ್ ಡ್ಯಾಂ ನಿರ್ಮಿಸಿ ಈ ಭಾಗದ ನೀರು ಕೆರೆಗೆ ಬರುವಂತೆ ಮಾಡಿದ್ದೇವೆ ಎಂದರು.
35 ಲಕ್ಷ ರೂ.ಗಳಲ್ಲಿ ಟ್ರೀ ಪಾರ್ಕ್ ಅಭಿವೃದ್ಧಿ ಮಾಡಲಾಗಿದೆ. ಟ್ರೀ ಪಾರ್ಕ್‌ನಲ್ಲಿ ಗೋಲ್ಮಾಲ್ ನಡೆದಿದೆ ಎಂದಿದ್ದಾರೆ. ಟ್ರೀ ಪಾಕ್ ರ್ ಕಾಮಗಾರಿ ಕುರಿತು ಎಸಿಬಿ, ಲೋಕಾಯುಕ್ತ ಸೇರಿ ಇಲಾಖಾ ವಿಚಾರಣೆ ನಡೆದಿದ್ದು, ಯಾವುದೇ ಹಗರಣ ನಡೆದಿಲ್ಲ ಎಂದು ಹೇಳಿದ್ದಾರೆ. ಇವರು ಕೂಡ ತನಿಖೆ ನಡೆಸಲಿ ಎಂದರು.
ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ತಾಲೂಕಿನಲ್ಲಿ ಅಧಿಕಾರಿಗಳು ಕಚೇರಿಯಲ್ಲಿ ಕೆಲಸ ನಿರ್ವಹಿಸದೆ ಜನಸಾಮಾನ್ಯರನ್ನು ಅಲೆದಾಡಿಸುತ್ತಿದ್ದಾರೆ. ಅಲ್ಲದೆ ನಿತ್ಯ ಫೈಲ್ ಹಿಡಿದು ಶಾಸಕರ ಮನೆ ಮುಂದೆ ನಿಲ್ಲುತ್ತಾರೆ. ಹೀಗಾದರೆ ಜನಸಾಮಾನ್ಯರ ಸಮಸ್ಯೆ ಬಗೆಹರಿಸುವವರು ಯಾರು?. ಭೀಕರ ಬರಗಾಲದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಅಭಾವ ಉಂಟಾಗಿದ್ದು, ಅದನ್ನು ನಿಭಾಯಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿ ನೆಪಮಾತ್ರಕ್ಕೆ ಗೋಶಾಲೆ ತೆರೆಯಲಾಗಿದೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ, ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ತಾಪಂ ಉಪಾಧ್ಯಕ್ಷ ಮುದೇಗೌಡ್ರು ಬಸವರಾಜಪ್ಪ, ತಾಪಂ ಸದಸ್ಯ ಬಿದರಕೆರೆ ಬಸವರಾಜ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಗುಡ್ಡದಲಿಂಗನಹಳ್ಳಿ ನಾಗರಾಜ್, ಮುಖಂಡರಾದ ಬಿ.ಲೋಕೇಶ ,ಬೈರೇಶ್, ವೀರಣ್ಣಗೌಡ, ವೆಂಕಟೇಶ್ ಪ್ರಕಾಶ್, ದಾದಾಪೀರ್, ರೇಣುಕೇಶ್ ,ಆದರ್ಶ, ಯುಸೂಫ್ ಸೇರಿದಂತೆ ಇತರರು ಹಾಜರಿದ್ದರು.